IPL Playoffs: ತಗ್ಗೋದೇ ಇಲ್ಲ – 18ರ ನಂಟು ಮುಂದುವರಿಸಿದ ಆರ್‌ಸಿಬಿ!

Public TV
2 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB vs CSK) ತಂಡ ಅದ್ಭುತ ಜಯದೊಂದಿಗೆ 9ನೇ ಬಾರಿಗೆ ಐಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಮೇ 18ರೊಂದಿಗೆ ಹೊಂದಿದ್ದ ನಂಟನ್ನು ಆರ್‌ಸಿಬಿ ಮುಂದುವರಿಸಿದೆ.

18ರ ಜೊತೆಗೆ ಏಕೆ ವಿಶೇಷ ನಂಟು?
ಆರ್‌ಸಿಬಿ vs ಸಿಎಸ್‌ಕೆ ನಡುವಣ ಮುಖಾಮುಖಿ ಇತಿಹಾಸದಲ್ಲಿ ಮೊದಲ ಬಾರಿ 18ರ ನಂಟು ಶುರುವಾಗಿದ್ದು 2013ರಲ್ಲಿ. ಅಂದು ಆರ್‌ಸಿಬಿ ತಂಡ ಸಿಎಸ್‌ಕೆ ಎದುರು 24 ರನ್‌ಗಳ ಜಯ ದಾಖಲಿಸಿತ್ತು. ವಿರಾಟ್‌ ಕೊಹ್ಲಿ ಆ ಪಂದ್ಯದಲ್ಲಿ 29 ಎಸೆತಗಳಲ್ಲಿ ಅಜೇಯ 56 ರನ್‌ ಸಿಡಿಸಿ ಅಬ್ಬರಿಸಿದ್ದರು. ಬಳಿಕ 2014ರಲ್ಲೂ ಸಿಎಸ್‌ಕೆ ಎದುರು ಮೇ 18ರಂದೇ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲೂ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ್ದರು.

ಇದರೊಂದಿಗೆ 2016ರ ಮೇ 18ರಂದು ಕಿಂಗ್ಸ್‌ ಪಜಾಬ್‌ ವಿರುದ್ಧ, 2023ರ ಮೇ 18ರಂದು ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧವೂ ಆರ್‌ಸಿಬಿ ಗೆದ್ದಿತ್ತು. 2024ರಲ್ಲಿ ಮತ್ತೊಮ್ಮೆ ಸಿಎಸ್‌ಕೆ ವಿರುದ್ಧ ಗೆದ್ದು ಮೇ 18ರ ನಂಟು ಮುಂದುವರಿಸಿದೆ. ಅಲ್ಲದೇ ಕಿಂಗ್‌ ಕೊಹ್ಲಿ ಅವರ ಜೆರ್ಸಿ ನಂಬರ್‌ ಸಹ 18 ಆಗಿರುವುದು ವಿಶೇಷವಾಗಿದ್ದು, ಇದೇ ಆರ್‌ಸಿಬಿ ಗೆಲುವಿಗೆ ಕಾರಣ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

ಈ ಬಗ್ಗೆ ಆರ್‌ಸಿಬಿ ಸಹ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ, 18 ಎಂದೆಂದಿಗೂ ನಮ್ಮ ನೆಚ್ಚಿನ ಸಂಖ್ಯೆ, ಮೇ 18 ರಂದು (18th May Game) ನಾವು ಎಂದಿಗೂ ಪಂದ್ಯವನ್ನು ಸೋತಿಲ್ಲ ಎಂದು ಬರೆದುಕೊಂಡಿದೆ.

ಕೊಹ್ಲಿ ಮೇ 18ರಂದು ನೀಡಿರುವ ಬ್ಯಾಟಿಂಗ್‌ ಪ್ರದರ್ಶನ:
56* (29) – ಸಿಎಸ್‌ಕೆ ವಿರುದ್ಧ 2013ರಲ್ಲಿ (ಆರ್‌ಸಿಬಿಗೆ ಜಯ)
27 (29) – ಸಿಎಸ್‌ಕೆ ವಿರುದ್ಧ 2014ರಲ್ಲಿ (ಆರ್‌ಸಿಬಿಗೆ ಜಯ)
113 (50) – ಪಂಜಾಬ್ ಕಿಂಗ್ಸ್‌ ವಿರುದ್ಧ 2016ರಲ್ಲಿ (ಆರ್‌ಸಿಬಿಗೆ ಜಯ)
100 (63) – ಎಸ್‌ಆರ್‌ಎಚ್‌ ವಿರುದ್ಧ 2023ರಲ್ಲಿ (ಆರ್‌ಸಿಬಿಗೆ ಜಯ)
47 (29) – ಸಿಎಸ್‌ಕೆ ವಿರುದ್ಧ 2024ರಲ್ಲಿ (ಆರ್‌ಸಿಬಿಗೆ ಜಯ)

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಕಿಂಗ್‌:
ಸದ್ಯ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ವಿರಾಟ್‌ ಕೊಹ್ಲಿ 14 ಲೀಗ್‌ ಪಂದ್ಯಗಳಲ್ಲಿ 64.36 ಸರಾಸರಿ, 155.6 ಸ್ಟ್ರೈಕ್‌ರೇಟ್‌ನೊಂದಿಗೆ 708 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.

Share This Article