ಐಪಿಎಲ್‌ ಉದಯೋನ್ಮುಖ ಪ್ರತಿಭೆಗಳ ಮಹಾ ಹಬ್ಬ..!

4 Min Read

ಐಸಿಎಲ್‌ಗೆ ವಿರುದ್ಧವಾಗಿ ಶುರುವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಕ್ರಿಕೆಟ್‌ ಟೂರ್ನಿ ಇಂದು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿ ಬೆಳೆದುನಿಂತಿದೆ. ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆಯಾಗಿದೆ. ಇದರ ಯಶಸ್ಸು ದೇಶದಲ್ಲಿ ಇತರ ಕ್ರೀಡೆಗಳ ಬೆಳವಣಿಗೆಗೆ ಸ್ಫೂರ್ತಿಯಾಗಿದೆ. 2008ರಲ್ಲಿ ಶುರುವಾದ ಟಿ20 ಮಾದರಿಯ ಕ್ರಿಕೆಟ್‌ ಲೀಗ್‌ 18 ಆವೃತ್ತಿಗಳನ್ನ ಯಶಸ್ವಿಯಾಗಿ ಪೂರೈಸಿದ್ದು, 19ನೇ ಆವೃತ್ತಿಗೆ ಪದಾರ್ಪಣೆ ಮಾಡಲು ಸಜ್ಜಾಗಿದೆ.

ಹೌದು. ಕಳೆದ 18 ವರ್ಷಗಳಲ್ಲಿ‌ ತನ್ನ ಮಾರುಕಟ್ಟೆ ಮೌಲ್ಯವನ್ನ 1 ಲಕ್ಷ ಕೋಟಿಗೂ ಅಧಿಕ ಮೊತ್ತಕ್ಕೆ ವೃದ್ಧಿಸಿಕೊಳ್ಳುವ ಮೂಲಕ ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಆಗಿ ರೂಪುಗೊಂಡಿರುವ ಐಪಿಎಲ್‌, ತಾನು ಬೆಳೆದಂತೆ ಇತರ ಕ್ರೀಡೆಗಳ ಬೆಳವಣಿಗೆಗೂ ಸ್ಫೂರ್ತಿಯಾಗಿ ನಿಂತಿದೆ. ಚುಟುಕು ಮಾದರಿಯ ಐಪಿಎಲ್‌ ವಯಸ್ಸಿನ ಮಿತಿಯಿಲ್ಲದೇ ಎಲ್ಲರನ್ನೂ ಆಕರ್ಷಿಸುತ್ತಿದೆ. ಇದರ ಪ್ರೇರಣೆಯಿಂದ ವಿಶ್ವದ ವಿವಿಧ ದೇಶದಗಳಲ್ಲಿ ಹಲವು ಮಾದರಿಯ ಚುಟುಕು ಟೂರ್ನಿಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಐಪಿಎಲ್‌ ಬಂದಾಗಿನಿಂದ ದೇಶದಲ್ಲಿ ಕುಂಟುತ್ತಿದ್ದ ಹಲವು ಕ್ರೀಡೆಗಳು ಈಗ ಪ್ರವರ್ಧಮಾನಕ್ಕೆ ಬರುತ್ತಿವೆ. ಅಷ್ಟೇ ಅಲ್ಲದೇ ಇದೀಗ ಟಿ20 ಮಾದರಿಯಲ್ಲೇ ಟೆಸ್ಟ್‌ ಕ್ರಿಕೆಟ್‌ (Test Cricket) ಆಯೋಜನೆಗೂ ತಯಾರಿ ನಡೆಯುತ್ತಿರುವುದು ನಿಜಕ್ಕೂ ಗಮನಾರ್ಹ.

ಫ್ರಾಂಚೈಸಿ ಸಂಸ್ಕೃತಿ ಬೆಳೆಸಿದ ಐಪಿಎಲ್‌
2006ರಿಂದಲೇ ಟಿ20 ಚುಟುಕು ಕ್ರಿಕೆಟ್‌ ಶುರುವಾಗಿದ್ದರೂ 2007ರ ಟಿ20 ವಿಶ್ವಕಪ್‌ ಟೂರ್ನಿ ವರೆಗೆ ಅಷ್ಟೇನು ಜನಪ್ರಿಯತೆ ಪಡೆದಿರಲಿಲ್ಲ. 2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿದ್ದು, ಟಿ20 ಕ್ರಿಕೆಟ್‌ಗೆ ಹಾಕಿದ ಭದ್ರ ಬುನಾದಿ. ಆ ನಂತರ 2008ಲ್ಲಿ ಪದಾರ್ಪಣೆ ಮಾಡಿದ ಐಪಿಎಲ್‌ ಟೂರ್ನಿ ಫ್ರಾಂಚೈಸಿ ಆಧಾರಿತ ಲೀಗ್‌ ಸಂಸ್ಕೃತಿಯನ್ನ ಹುಟ್ಟು ಹಾಕಿತು. ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಮೇರು ಇತಿಹಾಸ ಹೊಂದಿರುವ ಹಾಕಿ, ಟೆನಿಸ್‌, ಬ್ಯಾಡ್ಮಿಂಟನ್‌, ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯೂ ಕಾರಣವಾಯಿತು.

ಉದಯೋನ್ಮುಖ ಪ್ರತಿಭೆಗಳಿಗೆ ದೊಡ್ಡ ವೇದಿಕೆ
ಇಂದು ರಾಷ್ಟ್ರೀಯ ತಂಡದ ಆಯ್ಕೆಯ ಮಾನದಂಡವನ್ನೇ ಬದಲಿಸಿರುವ ಐಪಿಎಲ್‌, ರಣಜಿ ಸೇರಿದಂತೆ ದೇಶಿಯ ಟೂರ್ನಿಗಳ ಮೇಲಿನ ಅವಲಂಬನೆಯನ್ನೂ ತಗ್ಗಿಸಿದೆ. ಎಲೆ ಮರೆ ಕಾಯಿಯಂತಿದ್ದ ಅದೆಷ್ಟೊ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಐಪಿಎಲ್‌ನಿಂದಾಗಿಯೇ ಭಾರತ ಕ್ರಿಕೆಟ್‌ ತಂಡ ಇಂದು ಜಗತ್ತಿನ ಬಲಿಷ್ಟ ತಂಡಗಳಲ್ಲಿ ಒಂದಾಗಿದೆ ಅಂದ್ರೆ ತಪ್ಪಾಗಲಾರದು. ಏಕೆಂದ್ರೆ ಐಪಿಎಲ್‌ನಲ್ಲಿ ಅನುಭವಿಗಳು, ವಿದೇಶಿ ಆಟಗಾರನ್ನು ಎದುರಿಸುವ ಪ್ಲೇಯರ್ಸ್‌ ಬಳಿಕ ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದು ಯಶಸ್ಸಿನ ಹಾದಿ ಕಂಡುಕೊಳ್ಳುತ್ತಿದ್ದಾರೆ.



ಮಿಂಚಿದ ಸ್ಟಾರ್ಸ್‌ಗೆ ಐಪಿಎಲ್‌ ಸ್ಫೂರ್ತಿ
2023, 2024ರ ಐಪಿಎಲ್‌ ಆವೃತ್ತಿಯ ಬಳಿಕ ಯಶಸ್ವಿ ಜೈಸ್ವಾಲ್‌, ರಿಂಕು ಸಿಂಗ್‌, ಅಭಿಷೇಕ್‌ ಶರ್ಮಾ, ಶಿವಂ ದುಬೆ, ಹರ್ಷಿತ್‌ ರಾಣಾ, ಧ್ರುವ್‌ ಜುರೆಲ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮಾ, ತಿಲಕ್‌ ವರ್ಮಾ, ವರುಣ್‌ ಚಕ್ರವರ್ತಿ ಮೊದಲಾದವರು ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದುಕೊಳ್ಳಲು ಐಪಿಎಲ್‌ ಸ್ಫೂರ್ತಿಯಾಗಿದೆ. ಅಷ್ಟೇ ಯಾಕೆ? ಗುಜರಾತ್‌ ಟೈಟಾನ್ಸ್‌ ತಂಡವನ್ನ 2 ಆವೃತ್ತಿಗಳಲ್ಲಿ ಮುನ್ನಡೆಸಿದ ಶುಭಮನ್‌ ಗಿಲ್‌ ಇಂದು ಟೀಂ ಇಂಡಿಯಾ ಏಕದಿನ, ಟೆಸ್ಟ್‌ ಕ್ಯಾಪ್ಟನ್‌ ಆಗೋದಕ್ಕೆ ಐಪಿಎಲ್‌ ಸ್ಫೋರ್ತಿ ಅಂದ್ರೆ ತಪ್ಪಾಗದು. ಇದರಿಂದಾಗಿ ಮೂರು ಮಾದರಿಗಳಲ್ಲೂ ಪ್ರತಿಭಾವಂತ ಆಟಗಾರರರ ದಂಡನ್ನೇ ಹೊಂದಿರುವ ಭಾರತ, ಏಕಕಾಲದಲ್ಲಿ ಎಲ್ಲಾ ಮಾದರಿಗಳಲ್ಲಿ ತಂಡಗಳನ್ನ ಕಣಕ್ಕಿಳಿಸುವ ಸಾಮರ್ಥ್ಯ ಬೆಳೆಸಿಕೊಂಡಿದೆ.

ಹೊಟ್ಟೆ ತುಂಬಿಸಿದ ಐಪಿಎಲ್‌
ಕ್ರೀಡೆಯಿಂದ ಹೊಟ್ಟೆ ತಂಬಲ್ಲ ಎಂಬ ಮಾತುಗಳನ್ನು ಅಕ್ಷರಶಃ ಸುಳ್ಳಾಗಿಸಿರುವ ಐಪಿಎಲ್‌, ಒಂದೇ ಆವೃತ್ತಿಗೆ ಆಟಗಾರನೊಬ್ಬ 1 ರಿಂದ 27 ಕೋಟಿ ರೂಪಾಯಿ ಪಡೆಯುವರೆಗೂ ಆರ್ಥಿಕವಾಗಿ ಆಟಗಾರರನ್ನ ಸೆಳೆದಿದೆ. ಅಲ್ಲದೇ ದೀರ್ಘಾವಧಿ ಮಾದರಿಯ ಟೆಸ್ಟ್‌ ಕ್ರಿಕೆಟ್‌ಗೂ ಹಿಮ್ಮುಖವಾಗಿ ಐಪಿಎಲ್‌ ಹೊಸ ಸ್ವರೂಪ ನೀಡುವಲ್ಲಿ ಪಾತ್ರ ವಹಿಸಿದೆ. ಏಕೆಂದ್ರೆ ದಶಕಗಳ ಹಿಂದೆ ನಿಧಾನಗತಿಯ ಆಟದಿಂದ ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳುತ್ತಿತ್ತು. ಆದ್ರೆ ಇಂದು ಆಟಗಾರರ ಆಕ್ರಮಣಕಾರಿ ಶೈಲಿಯ ಆಟದಿಂದ ಫಲಿತಾಂಶ ಕಾಣುತ್ತಿವೆ.

ಕೊಹ್ಲಿ, ರೋಹಿತ್‌, ಮಹಿಗೆ ಕೊನೆ ಟೂರ್ನಿ ಆಗುತ್ತಾ?
2023ರ ಟೂರ್ನಿ ಆರಂಭದಿಂದಲೂ ನಿವೃತ್ತಿಯ ಸುಳಿವು ಕೊಟ್ಟಿರುವ ಸಿಎಸ್‌ಕೆ ತಂಡದ ಜೀವಾಳ ಎಂ.ಎಸ್‌ ಧೋನಿ (MS Dhoni) ಅವರಿಗೆ 19ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಕೊನೇ ಲೀಗ್‌ ಆಗಲಿದೆ, ಆ ನಂತರ ಮಹಿ ಚೆನ್ನೈ ತಂಡದ ಮೆಂಟರ್‌ ಆಗಿ ಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆದ್ರೆ ಮಹಿ ಆಪ್ತರು ಇನ್ನೂ ಎರಡು ಸೀಸನ್‌ ಆಡಬಹುದು ಅನ್ನೋ ಮಾತುಗಳನ್ನಾಡ್ತಿದ್ದಾರೆ. ಮತ್ತೊಂದು ಕಡೆ ಏಕದಿನ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಟೀಂ ಇಂಡಿಯಾ ಸ್ಟಾರ್ಸ್‌ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಅವರಿಗೂ 19ನೇ ಆವೃತ್ತಿ ಕೊನೆಯಾಗುತ್ತಾ? ಅನ್ನೋ ಪ್ರಶ್ನೆಗಳು ಎದ್ದಿವೆ. ಏಕೆಂದ್ರೆ ಈಗಾಗಲೇ ಟಿ20, ಟೆಸ್ಟ್‌ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿರುವ ಈ ದಿಗ್ಗಜರು 2027ರ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸುವ ಉದ್ದೇಶದಿಂದ ಐಪಿಎಲ್‌ಗೆ ಗುಡ್‌ಬೈ ಹೇಳುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.

ಕ್ರಿಕೆಟ್‌ ಮೀರಿ ಬೆಳೆದ ಐಪಿಎಲ್
ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಕ್ರಿಕೆಟ್ ಪಂದ್ಯಾವಳಿಯಾಗಿ ಉಳಿದುಕೊಂಡಿಲ್ಲ. ಇದು ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದಲ್ಲಿ ನೆರವಾಗುವ ಬೃಹತ್ ವೇದಿಕೆಯಾಗಿ ಪರಿವರ್ತನೆಗೊಂಡಿದೆ. ದೇಶದಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೂ ದಾರಿ ಮಾಡಿಕೊಟ್ಟಿದೆ. ಹೇಗೆ ಅಂತಾ ನೋಡೋದಾದ್ರೆ ಪ್ರತಿ ವರ್ಷ ಐಪಿಎಲ್‌ಗೆ ಸಾಕಷ್ಟು ವಿದೇಶಿ ಆಟಗಾರರು ಬರೋದ್ರಿಂದ ಅವರ ಕುಟುಂಬಗಳು ಹಾಗೂ ಅವರನ್ನೇ ನೋಡಲು ಬರುವ ಅಭಿಮಾನಿಗಳು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿಯುತ್ತಾರೆ. ಹೀಗಾಗಿ ಪ್ರವಾಸೋದ್ಯಮಕ್ಕೂ ಐಪಿಎಲ್‌ ಉತ್ತೇಜನ ನೀಡಿದಂತಾಗಿದೆ. ಜೊತೆಗೆ ಐಪಿಎಲ್ ತಂಡಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುತ್ತವೆ. ಅವರ ಜೊತೆ ಸಾವಿರಾರು ಅಭಿಮಾನಿಗಳು ಕೂಡ ಹೋಗುತ್ತಾರೆ. ಇದರಿಂದ ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕಾಫಿ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಾಗುತ್ತದೆ. ವಿಮಾನಗಳು, ಟ್ಯಾಕ್ಸಿ, ರೈಲು ಮತ್ತು ಬಸ್ಸುಗಳ ಬುಕ್ಕಿಂಗ್‌ ಸಹ ಹೆಚ್ಚಾಗುತ್ತವೆ.

ದೇಶದ ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್‌ ಫೀವರ್‌ ಹೆಚ್ಚಳಕ್ಕೆ ಕಾರಣಿಭೂತವಾಗಿರುವ ಈ ಚುಟುಕು ಕ್ರಿಕೆಟ್‌, ಕೇವಲ ಭಾರತದಲ್ಲಲ್ಲದೇ ವಿದೇಶಗಳಲ್ಲೂ ಫ್ರಾಂಚೈಸಿ ಆಧಾರಿತ ಕ್ರಿಕೆಟ್‌ ಲೀಗ್‌ಗಳ ಉದಯಕ್ಕೆ ಕಾರಣವಾಗಿದೆ. ಟಿ20ಯಿಂದ ಆರಂಭವಾದ ಟೂರ್ನಿ ಈಗ ಟಿ10, 100 ಬಾಲ್‌ ಕ್ರಿಕೆಟ್‌ಗೆ ಬಂದುನಿಂತಿದೆ. ಮುಂದಿನ ಹಂತದಲ್ಲಿ 1 ದಿನದ ಟೆಸ್ಟ್‌ ರೂಪಕ್ಕೆ ಇಳಿಯುವ ಚಿಂತನೆಗಳು ನಡೆದಿವೆ. ಒಟ್ಟಿನಲ್ಲಿ ಐಪಿಎಲ್‌ ಟೂರ್ನಿ ಪ್ರತಿ ವರ್ಷ 2 ತಿಂಗಳ ಕಾಲ ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಮನರಂಜನೆ ಉಣಬಡಿಸಲಿದೆ.

Share This Article