Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

Public TV
2 Min Read

ಮುಂಬೈ: ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಟಾಟಾ ಐಪಿಎಲ್ 2023ರ ಫೈನಲ್‌ ಪಂದ್ಯ ಜಿಯೋಸಿನಿಮಾದಲ್ಲಿ‌ ಏಕಕಾಲಕ್ಕೆ 3.2 ಕೋಟಿ ಜನರಿಂದ ವೀಕ್ಷಣೆ ಕಂಡಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನ ಪುಡಿಪುಡಿ ಮಾಡಿದೆ.

ಸೋಮವಾರ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್‌ ಟೈಟಾನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯವು ರೋಚಕತೆಯಿಂದ ಕೂಡಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಗುಜರಾತ್‌ ಟೈಟಾನ್ಸ್‌ ಭರ್ಜರಿ ಪ್ರದರ್ಶನ ನೀಡಿತು. ಸಾಯಿ ಸುದರ್ಶನ್‌ 18.3ನೇ ಓವರ್‌ನಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಪಂದ್ಯದ ವೀಕ್ಷಕರ ಸಂಖ್ಯೆ 3 ಕೋಟಿಗೆ ತಲುಪಿತ್ತು. 19.1ನೇ ಓವರ್‌ನಲ್ಲಿದ್ದಾಗ 3.1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಕೊನೆಯ 3 ಎಸೆತಗಳು ಬಾಕಿಯಿರುವಂತೆ 3.2 ಕೋಟಿಗೆ ತಲುಪಿತ್ತು. ಇದು ಈ ಹಿಂದಿನ ಎಲ್ಲ ದಾಖಲೆಗಳನ್ನ ಉಡೀಸ್‌ ಮಾಡಿದೆ.

ಜಿಯೋಸಿನಿಮಾ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆಯನ್ನ ಮುರಿದಿದೆ. ಜೊತೆಗೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಿಸಲ್ಪಟ್ಟಿದ್ದ ವಿಶ್ವದಾಖಲೆಗಳೆಲ್ಲವನ್ನೂ ನುಚ್ಚುನೂರು ಮಾಡಿದೆ. 2013ರ ವಿಶ್ವಕಪ್‌ ಪಂದ್ಯವನ್ನು 2.53 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಇದನ್ನೂ ಓದಿ: IPL Champions 2023: ಕೊನೆಯಲ್ಲಿ ಜಡೇಜಾ ಜಾದು, 5ನೇ ಬಾರಿಗೆ ಚೆನ್ನೈಗೆ ಚಾಂಪಿಯನ್‌ ಕಿರೀಟ

ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಆಟ ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೂ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಗತವೈಭವ ನೆನಪಿಸುವಂಥ ಬ್ಯಾಟಿಂಗ್ ಪ್ರದರ್ಶಿಸಿದಾಗ ಗರಿಷ್ಠ 2.2 ಕೋಟಿ ವೀಕ್ಷಕರ ದಾಖಲೆ ಕಂಡಿತ್ತು. ಇದನ್ನೂ ಓದಿ: IPL 2023 Finals: ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು, ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್ – CSK ರನ್ನರ್ ಅಪ್?

ಟಾಟಾ ಐಪಿಎಲ್ 2023ರ ಪಂದ್ಯಗಳನ್ನು ವೀಕ್ಷಿಸಲು ಜಿಯೋಸಿನಿಮಾ, ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಆದ್ಯತೆ ಆಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿಯಾಗಿವೆ. ರೋಚಕ ಪಂದ್ಯಗಳನ್ನು ವೀಕ್ಷಿಸುವ ವೇಳೆ ಜಿಯೋಸಿನಿಮಾದಲ್ಲಿ ಅಭಿಮಾನಿ ಕೇಂದ್ರಿತವಾದ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿತ್ತು. ಉದಾಹರಣೆಗೆ ಎಲ್ಲಾ ನೆಟ್ವರ್ಕ್ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್ ನೀಡಲಾಗಿತ್ತು. 4K ಸ್ಟ್ರೀಮಿಂಗ್ ಜೊತೆಗೆ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಜೀತೋ ಧನ್ ಧನಾ ಧನ್ ಸ್ಪರ್ಧೆಯ ಮೂಲಕ ಪ್ರತೀ ಪಂದ್ಯದ ವೀಕ್ಷಣೆಯ ವೇಳೆ ಕಾರು ಗೆಲ್ಲುವ ಜೊತೆ ಅತ್ಯಾಕರ್ಷಕ ಬಹುಮಾನಗಳನ್ನೂ ವಿತರಿಸಲಾಗುತ್ತಿತ್ತು.

ಟಾಟಾ ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಜಿಯೋಸಿನಿಮಾ 26 ಅಗ್ರ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅವುಗಳಲ್ಲಿ (ಸಹ-ಪ್ರಸ್ತುತ ಪ್ರಾಯೋಜಕ) ಡ್ರೀಮ್11, (ಕೋ-ಪವರ್ಡ್) ಜಿಯೋಮಾರ್ಟ್, ಫೋನ್‌ಪೇ, ಟಿಯಾಗೋ ಇವಿ, ಜಿಯೋ (ಸಹ ಪ್ರಾಯೋಜಕ) ಆ್ಯಪ್ಪಿ ಫಿಜ್, ಇಟಿಮನೀ, ಕ್ಯಾಸ್ಟ್ರಾಲ್, ಟಿವಿಎಸ್, ಓರಿಯೊ, ಬಿಂಗೋ, ಸ್ಟಿಂಗ್, ಅಜಿಯೋ, ಹೈಯರ್, ರುಪೇ, ಲೂಯಿಸ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು ಎಎಂಎಫ್ಐ ಸೇರಿವೆ.

Share This Article