IPL 2026 Retention | ರಿಟೇನ್‌ ಪಟ್ಟಿ ಬಿಡುಗಡೆಗೆ ಇಂದೇ ಡೆಡ್‌ಲೈನ್‌ – ಸಂಜು ಸಿಎಸ್‌ಕೆಗೆ, ಜಡ್ಡು ರಾಜಸ್ಥಾನ್‌ಗೆ

Public TV
2 Min Read

– 2023ರ ಐಪಿಎಲ್‌ ಫೈನ್‌ನಲ್ಲಿ ಸಿಕ್ಸರ್‌, ಬೌಂಡರಿ ಚಚ್ಚಿ ಟ್ರೋಫಿ ಗೆಲ್ಲಿಸಿದ್ದ ಜಡೇಜಾ

ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಗೆ ಸಕಲ ತಯಾರಿ ಶುರುವಾಗಿದೆ. ಡಿಸೆಂಬರ್‌ 15-16ರಂದು 2026ರ ಐಪಿಎಲ್‌ (IPL 2026) ಟೂರ್ನಿಗೆ ಮಿನಿ ಹರಾಜು ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಇಂದು ಸಂಜೆಯೊಳಗೆ ಎಲ್ಲಾ ಫ್ರಾಂಚೈಸಿಗಳು ರಿಟೇನ್‌ ಆಟಗಾರರ ಪಟ್ಟಿ (IPL 2026 Retention List) ಬಿಡುಗಡೆ ಮಾಡುವಂತೆ ಐಪಿಎಲ್‌ ಆಡಳಿತ ಮಂಡಳಿ ಸೂಚಿಸಿದೆ.

ಇದಕ್ಕೂ ಮುನ್ನವೇ ಟ್ರೇಡ್‌ ಇನ್‌ ವಿಂಡೋ ನಿಯಮದ ಅಡಿಯಲ್ಲಿ ಫ್ರಾಂಚೈಸಿಗಳು (IPL Franchises) ಕೆಲ ಆಟಗಾರರ ವಿನಿಮಯ ಮಾಡಿಕೊಂಡಿವೆ.

ಯಾವ ತಂಡಕ್ಕೆ ಯಾರು?
* ಆರ್‌ಆರ್‌ಗೆ ರವೀಂದ್ರ ಜಡೇಜಾ
ಎಂ.ಎಸ್‌ ಧೋನಿ ಹೊರತುಪಡಿಸಿದ್ರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮತ್ತೊಂದು ಜೀವಾಳ ಅಂದ್ರೆ ಅದು ರವೀಂದ್ರ ಜಡೇಜಾ. 2023ರ ಐಪಿಎಲ್‌ ಫೈನಲ್‌ನಲ್ಲಿ ಕೊನೇ 2 ಎಸೆತಗಳಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸುವ ಮೂಲಕ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆದರೀಗ ಅವರನ್ನ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಬಿಟ್ಟುಕೊಡಲು ಸಿಎಸ್‌ಕೆ ಒಪ್ಪಿಕೊಂಡಿದೆ. ಕಳೆದ 12 ಆವೃತ್ತಿಗಳಿಂದ ಸಿಎಸ್‌ಕೆ ಪರ ರವೀಂದ್ರ ಜಡೇಜಾ 250ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ. ಕಳೆದ ಬಾರಿ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ಜಡ್ಡುರನ್ನ 18 ಕೋಟಿ ರೂ.ಗಳಿಗೆ ರಿಟೇನ್‌ ಮಾಡಿಕೊಂಡಿತ್ತು. ಇದೀಗ ರಾಜಸ್ಥಾನ್‌ ರಾಯಲ್ಸ್‌ 14 ಕೋಟಿಗೆ ಟ್ರೇಡ್‌ ಡೀಲ್‌ ಮಾಡಿಕೊಂಡು ವಿನಿಮಯ ಮಾಡಿಕೊಂಡಿದೆ.

* ಸಿಎಸ್‌ಕೆಗೆ ಸಂಜು ಸ್ಯಾಮ್ಸನ್‌
ಇನ್ನೂ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನೂ ಆಗಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್‌ ಅವರನ್ನ ಸಿಎಸ್‌ಕೆ ಫ್ರಾಂಚೈಸಿ 18 ಕೋಟಿ ರೂ.ಗೆ ವಿನಿಮಯ ಮಾಡಿಕೊಂಡಿದೆ. 2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್‌ ಮೊದಲು ಡೆಲ್ಲಿ ಕ್ಯಾಪಿಟಲ್ಸ್‌ ಪರ 2 ಆವೃತ್ತಿಗಳಲ್ಲಿ ಆಡಿದ್ದರು. ಆ ಬಳಿಕ 2016ರಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನ ಪ್ರತಿನಿಧಿಸಿದ್ದರು. ಇದೀಗ 3ನೇ ಫ್ರಾಂಚೈಸಿಯಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನ ಪ್ರತಿನಿಧಿಸಲಿದ್ದಾರೆ. ಈವರೆಗೆ ಸಂಜು 177 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ.

ಇದರೊಂದಿಗೆ ಚೆನ್ನೈ ತಂಡದ ಮತ್ತೊಬ್ಬ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ 2.4 ಕೋಟಿ ರೂ.ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಬಿಕರಿಯಾಗಿದ್ದಾರೆ. ವೇಗಿ ಮೊಹಮ್ಮದ್‌ ಶಮಿ ಸನ್‌ ರೈಸರ್ಸ್‌ ಹೈದರಾಬಾದ್‌ನಿಂದ ಲಕ್ನೋ ಸೂಪರ್‌ ಜೈಂಟ್ಸ್‌ಗೆ 10 ಕೋಟಿ ರೂ.ಗೆ, ಲೆಗ್‌ ಸ್ಪಿನ್ನರ್‌ ಮಯಾಂಕ್ ಮಾರ್ಕಂಡೆ ಕೆಕೆಆರ್‌ ನಿಂದ ಮುಂಬೈ ಇಂಡಿಯನ್ಸ್‌ಗೆ 30 ಲಕ್ಷ ರೂ.ಗೆ, ಎಡಗೈ ವೇಗಿ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್‌ ನಿಂದ ಲಕ್ನೋ ಸೂಪರ್‌ ಜೈಂಟ್ಸ್‌ಗೆ 30 ಲಕ್ಷ ರೂ.ಗೆ, ಎಡಗೈ ಬ್ಯಾಟರ್‌ ನಿತೀಶ್‌ ರಾಣಾ ರಾಜಸ್ಥಾನ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ 4.2 ಕೋಟಿ ರೂ.ಗೆ ಹಾಗೂ ಆಲ್‌ರೌಂಡರ್‌ ಡೊನೊವನ್ ಫೆರೇರಾ ಡೆಲ್ಲಿ ಕ್ಯಾಪಿಟಲ್ಸ್‌ನಿಂದ ತವರು ಫ್ರಾಂಚೈಸಿ ರಾಜಸ್ಥಾನ್‌ ರಾಲ್ಸ್‌ಗೆ 75 ಲಕ್ಷ ರೂ.ಗಳಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.

ಇಂದು ಸಂಜೆ ಹೊತ್ತಿಗೆ ಎಲ್ಲಾ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ ಮಾಡಲಿದ್ದು, ಡಿಸೆಬರ್‌ 15 ಅಥವಾ 16ರಂದು ಮಿನಿ ಹರಾಜು ನಡೆಯಲಿದೆ.

Share This Article