ಗುವಾಹಟಿ: 15ರ ಬಾಲಕ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಬೆಂಕಿ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್, ಹಾಲಿ ಚಾಂಪಿಯನ್ಸ್ ಆರ್ಸಿಬಿ ವಿರುದ್ಧ 6 ವಿಕೆಟ್ಗಳ ಭರ್ಜರಿ ಗೆಲುವು ಕಂಡಿದೆ. ಈ ಮೂಲಕ ಸತತ 4ನೇ ಪಂದ್ಯ ಗೆದ್ದು, ಗೆಲುವಿನ ಓಟ ಮುಂದುವರಿಸಿದೆ.
15ರ ಹರೆಯದ ಪೋರನ ಬ್ಯಾಟಿಂಗ್ ವೈಭವದ ಮುಂದೆ ಮಂಕಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ ಗಳಿಂದ ಪರಾಭವಗೊಂಡಿತು. ಈ ಮೂಲಕ ಸೀಸನ್ ನಲ್ಲಿ ನಿರಂತರ ನಾಲ್ಕನೇ ಜಯ ಸಂಪಾದಿಸಿದ ರಾಜಸ್ಥಾನ ರಾಯಲ್ಸ್ 8 ಅಂಕಗಳೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿಯಿತು. ಸೋಲನುಭವಿಸಿದರೂ ಆರ್ಸಿಬಿ ಆಡಿದ ಮೂರು ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲೇ ಮುಂದುವರಿದಿದೆ.
ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಏಪ್ರಿಲ್ 10ರ ಶುಕ್ರವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 201 ರನ್ ಕಲೆ ಹಾಕಿತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ ಇನ್ನೂ 12 ಎಸೆತಗಳು ಬಾಕಿ ಉಳಿದಿದ್ದಾಗಲೇ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಹೆಜಲ್ವುಡ್ ಲೆಕ್ಕಕ್ಕಿಲ್ಲದಂತೆ ಚಚ್ಚಿದ ವೈಭವ್
ಈ ಹಿಂದಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಸವಾರಿ ನಡೆಸಿದ್ದ ವೈಭವ್ ಈ ಬಾರಿ ಆರ್ಸಿಬಿಯ ಪ್ರಧಾನ ವೇಗಿ ಜೋಶ್ ಹೇಜಲ್ವುಡ್ ಅವರ ಮೇಲೆ ಸವಾರಿ ಮಾಡಿದ್ರು. ಮೊದಲ ಬಾರಿ ಆಸ್ಟ್ರೇಲಿಯಾದ ವೇಗಿಯನ್ನು ಎದುರಿಸಿದ ಅವರು ಒಂದೇ ಓವರ್ ನಲ್ಲಿ 19 ರನ್ ಬಾರಿಸಿದರು. ಹ್ಯಾಟ್ರಿಕ್ ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ವೈಭವ್ಗೆ ಜೊತೆಯಾಗಿ ಧ್ರುವ್ ಜುರೆಲ್ ಕೂಡ ಅಬ್ಬರಿಸಲು ಶುರು ಮಾಡಿದ್ರು. ಇವರಿಬ್ಬರ ಹೊಡೆತಗಳ ರಭಸಕ್ಕೆ ಪವರ್ ಪ್ಲೇ ನಲ್ಲೇ ಬರೋಬ್ಬರಿ 97 ರನ್ ಸೇರ್ಪಡೆಯಾಯಿತು. ಇದರೊಂದಿಗೆ ಆರ್ ಸಿಬಿಯ ಜಂಘಾಬಲವೇ ಉದುಗಿಹೋಯಿತು.
5 ರನ್ ಅಂತರದಲ್ಲಿ 3 ವಿಕೆಟ್ ಉಡೀಸ್
8 ಓವರ್ಗಳಲ್ಲಿ 129 ರನ್ ಗಳಿಸಿದ್ದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ವಿಕೆಟ್ ಪತನದ ಬಳಿಕ ಕೇವಲ 5 ರನ್ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಮತ್ತೆ ಆರ್ಸಿಬಿ ಗೆಲುವಿನ ಕನಸು ಕಂಡಿತ್ತು. ಆದ್ರೆ ಮುರಿಯದ 5ನೇ ವಿಕೆಟ್ಗೆ ಜೊತೆಯಾದ ಜಡೇಜಾ, ಧ್ರುವ್ ಜುರೆಲ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ರಾಜಸ್ಥಾನ್ ಪರ ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ ಸ್ಫೋಟಕ 78 ರನ್ (7 ಸಿಕ್ಸರ್, 8 ಬೌಂಡರಿ) ಚಚ್ಚಿದ್ರೆ, ಧ್ರುವ್ ಜುರೆಲ್ 43 ಎಸೆತಗಳಲ್ಲಿ 81 ರನ್ (3 ಸಿಕ್ಸರ್, 8 ಬೌಂಡರಿ), ಜಡೇಜಾ 24 ರನ್, ಜೈಸ್ವಾಲ್ 13 ರನ್, ಪರಾಗ್ 3 ರನ್ ಕೊಡುಗೆ ನೀಡಿದ್ರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಯಲ್ಪಟ್ಟ ರಾಯಲ್ ಚಾಲೆಂಜರ್ಸ್ ತಂಡದ ವಿಕೆಟ್ ಗಳು ತರಗೆಲೆಯಂತೆ ಬೀಳುತ್ತಿದ್ದ ಸಂದರ್ಭದಲ್ಲಿ ಆಸರೆಯಾದವರು ನಾಯಕ ರಜತ್ ಪಾಟೀದಾರ್. ಕೇವಲ 40 ಎಸೆತಗಳನ್ನು ಎದುರಿಸಿದ ಅವರು 4 ಬೌಂಡರಿ ಮತ್ತು ಅಷ್ಟೇ ಸಂಖ್ಯೆಯ ಸಿಕ್ಸರ್ ಗಳನ್ನು ಒಳಗೊಂಡ 63 ರನ್ ಗಳಿಸಿ ಔಟಾದರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ದೇವದತ್ ಪಡಿಕ್ಕಲ್ ಬದಲಿಗೆ ಕ್ರೀಸಿಗಿಳಿದ ವೆಂಕಟೇಶ್ ಅಯ್ಯರ್ ಅವರು 15 ಎಸತೆದಲ್ಲಿ 29 ರನ್ ಬಾರಿಸಿದರು. ಅವರು ಕೊನೇ ಓವರ್ ನಲ್ಲಿ 21 ರನ್ ಬಾಚಿದ್ದರಿಂದ ತಂಡದ ಮೊತ್ತ 200 ದಾಟಿತು.



