8 ರನ್‌ ಅಂತರದಲ್ಲಿ4 ವಿಕೆಟ್‌ ಬಿದ್ದರೂ ಕೊನೋಲಿ ಏಕಾಂಗಿ ಆಟ – ಪಂಜಾಬ್‌ಗೆ ರೋಚಕ ಜಯ

2 Min Read

– ಮೊದಲ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್‌

ಚಂಡೀಗಢ: ಮಧ್ಯಮ ಕ್ರಮಾಂಕದಲ್ಲಿ ದಿಢೀರ್‌ ವಿಕೆಟ್‌ ಕಳೆದುಕೊಂಡರೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕೂಪರ್‌ ಕೊನೋಲಿ(Coper Connolly) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧ ಪಂಜಾಬ್‌ ಕಿಂಗ್ಸ್‌(Punjab Kings) ರೋಚಕ 3 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 162 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ಇನ್ನು 5 ಎಸೆತ ಬಾಕಿ ಇರುವಂತೆಯೇ 165 ರನ್‌ ಹೊಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಪ್ರಸಿದ್ಧ್‌ ಕೃಷ್ಣ ಮ್ಯಾಜಿಕ್‌:
12 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಿದ್ದಾಗ ಪಂಜಾಬ್‌ ಸುಲಭವಾಗಿ ಜಯ ಸಾಧಿಸಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಪ್ರಸಿದ್ಧ್‌ ಕೃಷ್ಣ ಕೈಗೆ ಬಾಲ್‌ ಸಿಕ್ಕಿದ ಕೂಡಲೇ ಮ್ಯಾಜಿಕ್‌ ಮಾಡಲು ಆರಂಭಿಸಿದರು. 18 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್‌ ಅಯ್ಯರ್‌ ಪ್ರಸಿದ್ಧ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಔಟಾದರು. ನಂತರ ವಾಷಿಂಗ್ಟನ್‌ ಸುಂದರ್‌ ನೆಹಲ್‌ ವಡೇರಾ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇದನ್ನೂ ಓದಿ: 15 ಎಸೆತಗಳಲ್ಲಿ ಫಿಫ್ಟಿ ಹೊಡೆದು 15ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸೂರ್ಯವಂಶಿ – ರಾಯಲ್ಸ್‌ಗೆ ಭರ್ಜರಿ ಜಯ

ನಂತರ ಬಂದ ಶಶಾಂಕ್‌ ಸಿಂಗ್‌ 4 ರನ್‌, ಸ್ಟೋಯಿನಸ್‌ ಅವರನ್ನು ಪ್ರಸಿದ್ಧ್‌ ಶೂನ್ಯಕ್ಕೆ ಔಟ್‌ ಮಾಡಿದಾಗ ಪಂದ್ಯ ಗುಜರಾತ್‌ ಪರ ವಾಲಿತ್ತು. 8 ರನ್‌ ಅಂತರದಲ್ಲಿ 4 ವಿಕೆಟ್‌ ಬಿದ್ದರೂ ಒಂದು ಕಡೆಯಲ್ಲಿ ಕೂಪರ್‌ ಕೊನೋಲಿ ಏಕಾಂಗಿಯಾಗಿ ನಿಂತು ಗುಜರಾತ್‌ ಬೌಲರ್‌ಗಳನ್ನು ದಂಡಿಸುತ್ತಿದ್ದರು.

ಕೊನೆಯ 18 ಎಸೆತಗಳಲ್ಲಿ 21 ರನ್‌ ಅಗತ್ಯವಿತ್ತು. ಅಶೋಕ್‌ ಶರ್ಮಾ 18ನೇ ಓವರ್‌ನಲ್ಲಿ 5 ರನ್‌ ನೀಡಿದರೆ 19ನೇ ಓವರ್‌ನಲ್ಲಿ ಪ್ರಸಿದ್ಧ್‌ ಕೃಷ್ಣ 14 ರನ್‌ ಬಿಟ್ಟುಕೊಟ್ಟರು. ವಾಷಿಂಗ್ಟನ್‌ ಸುಂದರ್‌ ಅವರ 20ನೇ ಓವರಿನ ಮೊದಲ ಎಸೆತವನ್ನು ಕೊನೋಲಿ ಬೌಂಡರಿ ಹೊಡೆಯುವ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಆಸ್ಟ್ರೇಲಿಯಾದ ಯುವ ಆಟಗಾರ 22 ವರ್ಷದ ಕೂಪರ್‌ ಕೊನೋಲಿ ಔಟಾಗದೇ 72 ರನ್‌(44 ಎಸೆತ, 5 ಬೌಂಡರಿ, 5 ಸಿಕ್ಸ್‌). ಪ್ರಭಸಿಮ್ರಾನ್‌ ಸಿಂಗ್‌ 37 ರನ್‌, ಶ್ರೇಯಸ್‌ ಅಯ್ಯರ್‌ 18 ರನ್‌ ಹೊಡೆದು ಔಟಾದರು. 6ನೇಯವರಾಗಿ ಬೌಲಿಂಗ್‌ ಮಾಡಿದ ಪ್ರಸಿದ್ಧ್‌ 3 ವಿಕೆಟ್‌ ಕಿತ್ತರು.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಗುಜರಾತ್‌ ಪರ ನಾಯಕ ಶುಭಮನ್‌ ಗಿಲ್ 39 ರನ್‌, ಜೋಸ್‌ ಬಟ್ಲರ್‌ 38 ರನ್‌, ಗ್ಲೇನ್‌ ಫಿಲಿಪ್ಸ್‌ 25 ರನ್‌, ರಾಹುಲ್‌ ತೆವಾಟಿಯಾ 11 ರನ್‌ ಹೊಡೆದರು.

Share This Article