ಕ್ಯಾಮರೂನ್‌ ಗ್ರೀನ್‌ 25.20 ಕೋಟಿಗೆ ಸೇಲಾದ್ರೂ ಸಿಗೋದು 18 ಕೋಟಿ!

2 Min Read

– ದುಬಾರಿ ಮೊತ್ತಕ್ಕೆ ಮಾರಾಟ, ಐಪಿಎಲ್‌ನಲ್ಲಿ ದಾಖಲೆ

ಅಬುಧಾಬಿ: ಐಪಿಎಲ್‌ ಹರಾಜಿನಲ್ಲಿ (IPL Auction) ಆರ್‌ಸಿಬಿಯ ಮಾಜಿ ಆಟಗಾರ, ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ (Cameron Green) ಇತಿಹಾಸ ನಿರ್ಮಿಸಿದ್ದಾರೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ತಂಡ ಕ್ಯಾಮರೂನ್‌ ಗ್ರೀನ್‌ ಅವರನ್ನು 25.20 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಿಡ್‌ಗೆ ಮಾರಾಟವಾದ ವಿದೇಶಿ ಆಟಗಾರ ದಾಖಲೆಗೆ ಪಾತ್ರವಾಗಿದ್ದಾರೆ.

ಮುಂಬೈ ಇಂಡಿಯನ್ಸ್‌ ಪರ್ಸ್‌ನಲ್ಲಿ 2.75 ಕೋಟಿ ರೂ. ಇದ್ದರೂ ಬಿಡ್‌ನಲ್ಲಿ ಪಾಲ್ಗೊಂಡಿತ್ತು. ನಂತರ ರಾಜಸ್ಥಾನ ರಾಯಲ್ಸ್‌ ಮತ್ತು ಕೆಕೆಆರ್‌ ಖರೀದಿಸಲು ಆಸಕ್ತಿ ತೋರಿಸಿದವು. ಆದರೆ ಅಂತಿಮವಾಗಿ ಕ್ಯಾಮರೂನ್‌ ಗ್ರೀನ್‌ ಅವರನ್ನು ಕೆಕೆಆರ್‌ ಖರೀದಿಸುವಲ್ಲಿ ಯಶಸ್ವಿಯಾಗಿದೆ.

ಈ ಹಿಂದೆ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ 2024ರ ಮಿನಿ ಹರಾಜಿನಲ್ಲಿ ಕೆಕೆಆರ್ 24.75 ಕೋಟಿ ರೂ. ನೀಡಿ ಖರೀದಿಸಿತ್ತು. ಇದೀಗ ಆ ದಾಖಲೆಯನ್ನ ಗ್ರೀನ್ ಬ್ರೇಕ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರನ್ನು 23 ಕೋಟಿ ರೂ. ಸನ್​ರೈಸರ್ಸ್ ಹೈದರಾಬಾದ್​ ಉಳಿಸಿಕೊಂಡಿದೆ.

 

ಕ್ಯಾಮರೂನ್ ಗ್ರೀನ್ ಐಪಿಎಲ್​​ನಲ್ಲಿ 29 ಪಂದ್ಯಗಳನ್ನಾಡಿದ್ದು, 153ರ ಸ್ಟ್ರೈಕ್​ರೇಟ್​​ನಲ್ಲಿ 707 ರನ್​ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳಿವೆ. ಬೌಲಿಂಗ್​​ನಲ್ಲೂ 16 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್​​ನಲ್ಲಿ 63 ಪಂದ್ಯಗಳಿಂದ 1 ಶತಕ, 8 ಅರ್ಧಶತಕಗಳ ನೆರವಿನಿಂದ 1334 ರನ್​ಗಳಿಸಿದ್ದಾರೆ. ಬೌಲಿಂಗ್​​ನಲ್ಲಿ 28 ವಿಕೆಟ್ ಪಡೆದಿದ್ದಾರೆ.

 

 

18 ಕೋಟಿ ಮಾತ್ರ ಸಿಗುತ್ತೆ:
25.20 ಕೋಟಿ ರೂ.ಗೆ ಗ್ರೀನ್‌ ಮಾರಾಟವಾದರೂ ಬಿಸಿಸಿಐ ನಿಯಮದಿಂದ ಅವರಿಗೆ 18 ಕೋಟಿ ರೂ. ಮಾತ್ರ ಸಿಗುತ್ತದೆ. ಈ ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರನಿಗೆ ಗರಿಷ್ಠ 18 ಕೋಟಿ ರೂ. ಮಾತ್ರ ನಿಗದಿ ಮಾಡಲಾಗಿದೆ. ಹೀಗಾಗಿ ಉಳಿದ 8 ಕೋಟಿ ರೂ. ಹೆಚ್ಚುವರಿ ಹಣವನ್ನು ಬಿಸಿಸಿಐಯ ಕಲ್ಯಾಣ ನಿಧಿಗೆ ನೀಡಬೇಕಾಗುತ್ತದೆ.

ತಂಡದಲ್ಲಿ ರಿಟೇನ್‌ ಆಗುವ ಆಟಗಾರರಿಗೆ ಕಡಿಮೆ ಮೊತ್ತ ಸಿಗುವ ಕಾರಣ ಬಿಸಿಸಿಐ ಈ ನಿಯಮ ಜಾರಿ ಮಾಡಿದೆ. ಕಳೆದ ಕಳೆದ ಸೀಸನ್​​ನಲ್ಲಿ ರಿಟೇನ್‌ ಆಗುವ ಮೊದಲ ಆಟಗಾರನಿಗೆ 18 ಕೋಟಿ ರೂ. ನಿಗದಿ ಮಾಡಲಾಗಿತ್ತು. ಹೀಗಾಗಿ ಈ ಬಾರಿ ವಿದೇಶಿ ಆಟಗಾರರನ ಗರಿಷ್ಠ ಮೊತ್ತವನ್ನು 18 ಕೋಟಿ ರೂ. ನಿಗದಿ ಮಾಡಲಾಗಿದೆ. ಈ ನಿಯಮ ಭಾರತೀಯ ಆಟಗಾರರಿಗೆ ಅನ್ವಯವಾಗುವುದಿಲ್ಲ.

Share This Article