IPL 2025 ಫೈನಲ್‍ಗೆ ಆರ್‌ಸಿಬಿ ಗ್ರ್ಯಾಂಡ್ ಎಂಟ್ರಿ – ಬೆಂಗ್ಳೂರಲ್ಲಿ ಫ್ಯಾನ್ಸ್ ಸೆಲಬ್ರೇಷನ್

Public TV
1 Min Read

ಬೆಂಗಳೂರು: ಮಲ್ಲನ್‌ಪುರ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. ಈ ಗೆಲುವನ್ನು‌ ಆರ್‌ಸಿಬಿ ಫ್ಯಾನ್ಸ್ ನಗರದ ಹಲವೆಡೆ ಸಂಭ್ರಮಿಸುತ್ತಿದ್ದಾರೆ. ಓರಿಯಾನ್ ಮಾಲ್‌ನಲ್ಲಿ ಅಭಿಮಾನಿಗಳು ಆರ್‌ಸಿಬಿಗೆ ಜಯಘೋಷ ಕೂಗಿದ್ದಾರೆ. ಅಲ್ಲದೇ ಕುಣಿದು ಕುಪ್ಪಳಿಸಿದ್ದಾರೆ.

ವಿಜಯನಗರದಲ್ಲಿ RCB ಅಭಿಮಾನಿಗಳು ರಸ್ತೆ ತಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಿದ್ದು ರಸ್ತೆ ಕ್ಲಿಯರ್ ಮಾಡಿಸುತ್ತಿದ್ದಾರೆ.

ಪಂಜಾಬ್‌ ನೀಡಿದ 102 ರನ್‌ಗಳ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 106 ರನ್‌ ಸಿಡಿಸಿ ಗೆಲುವು ಸಾಧಿಸಿತು. ಈ ಮೂಲಕ 4ನೇ ಬಾರಿಗೆ ಫೈನಲ್‌ಗೆ ಎಂಟ್ರಿಕೊಟ್ಟಿದೆ.

2009, 2011, 2016ರ ಬಳಿಕ 4ನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿರುವ ಆರ್‌ಸಿಬಿ ಈ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ ಎಂದು ಕ್ರಿಕೆಟ್‌ ತಜ್ಞರು ಭವಿಷ್ಯ ನುಡಿದಿದ್ದಾರೆ. ಏಕೆಂದರೆ ಕಳೆದ 7 ವರ್ಷಗಳಲ್ಲಿ ನಡೆದ ಐಪಿಎಲ್‌ ಆವೃತ್ತಿಗಳಲ್ಲಿ ಐಪಿಎಲ್‌ ಕ್ವಾಲಿಫೈರ್‌-1 ನಲ್ಲಿ ಗೆದ್ದ ತಂಡಗಳೇ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

2018ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್‌, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್‌ ಟೈಟಾನ್ಸ್‌, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್‌ ತಂಡಗಳು ಕ್ವಾಲಿಫೈಯರ್‌-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್‌-1 ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Share This Article