ಸನ್‌ ರೈಸರ್ಸ್‌ಗೆ ಗುಜರಾತ್‌ ಗುನ್ನ, ಗಿಲ್‌ ನಾಯಕನ ಆಟ – ಟೈಟನ್ಸ್‌ಗೆ ಹ್ಯಾಟ್ರಿಕ್ ಜಯ

Public TV
2 Min Read
  • ಹೈದರಾಬಾದ್‌ಗೆ 4ನೇ ಹೀನಾಯ ಸೋಲು

ಹೈದರಾಬಾದ್‌‌: ಹೈದರಾಬಾದ್‌: 300 ರನ್‌ ಗುರಿ ಪೂರೈಸುವ ಗುರಿಯೊಂದಿಗೆ 2025ರ ಐಪಿಎಲ್‌ ಅಖಾಡಕ್ಕೆ ಧುಮುಕಿದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಆರಂಭದಲ್ಲೇ ಆಘಾತವಾಗಿದೆ. ಮೊದಲ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ಆರೆಂಜ್‌ ಆರ್ಮಿಗೆ ಮುಂದಿನ ಸತತ ನಾಲ್ಕು ಪಂದ್ಯಗಳಲ್ಲೂ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದೆ. ಇಂದು ತವರಿನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಸನ್‌ ರೈಸರ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಸನ್‌ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 152 ರನ್‌ ಕಲೆ ಹಾಕಿತು. ಬಳಿಕ ಕಣಕ್ಕಿಳಿದ ಟೈಟಾನ್ಸ್ ತಂಡ 16.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 153 ರನ್‌ ಕಲೆಹಾಕಿ ಗೆಲುವು ಸಾಧಿಸಿತು. ‌

ಗುಜರಾತ್‌ ಪರ ಶುಭಮನ್‌ ಗಿಲ್‌ 43 ಎಸೆತಗಳಲ್ಲಿ 9 ಬೌಂಡರಿ ನೆರವಿಂದ 61 ರನ್‌, ಶೆರ್ಫೇನ್ ರುದರ್ಫೋರ್ಡ್ 16 ಎಸೆತಗಳಲ್ಲಿ 1 ಸಿಕ್ಸರ್‌, 6 ಬೌಂಡರಿ ಸಿಡಿಸಿ 35 ರನ್‌ ಕಲೆಹಾಕಿ ಔಟಾಗದೇ ಉಳಿದರು. ವಾಷಿಂಗ್ಟನ್‌ ಸುಂದರ್‌ 29 ಎಸೆತಗಳಲ್ಲಿ 2 ಸಿಕ್ಸರ್‌, 5 ಬೌಂಡರಿ ನೆರವಿಂದ 49 ರನ್ ಕಲೆ ಹಾಕಿದರು.

ಹೈದರಾಬಾದ್‌ ಪರ ಮೊಹಮ್ಮದ್ ಶಮಿ 2 ವಿಕೆಟ್, ಪ್ಯಾಟ್ ಕಮಿನ್ಸ್ 1 ವಿಕೆಟ್‌ ಕಬಳಿಸಿದರು.

ಸನ್‌ರೈಸರ್ಸ್ ಹೈದರಾಬಾದ್ ಪರ ನಿತೀಶ್ ಕುಮಾರ್ ರೆಡ್ಡಿ 34 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 31 ರನ್‌,‌ ಹೆನ್ರಿಚ್ ಕ್ಲಾಸೆನ್ 19 ಎಸೆತಗಳಲ್ಲಿ 1 ಸಿಕ್ಸರ್‌, 2 ಫೋರ್‌ ನೆರವಿನಿಂದ 27 ರನ್‌, ಪ್ಯಾಟ್ ಕಮಿನ್ಸ್ 9 ಎಸೆತಗಳಲ್ಲಿ 1 ಸಿಕ್ಸರ್‌, 3 ಬೌಂಡರಿ ನೆರವಿಂದ 22 ರನ್‌, ಅಭಿಷೇಕ್‌ ಶರ್ಮಾ 16 ಎಸೆತಗಳಲ್ಲಿ 4 ಬೌಡರಿ ಸಿಡಿಸಿ 18, ಅನಿಕೇತ್ ವರ್ಮಾ 15 ಎಸೆತಗಳಲ್ಲಿ 18 ರನ್ ಕಲೆಹಾಕಿದರು.

ಗುಜರಾತ್‌ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್‌, ಪ್ರಸಿದ್ಧ್ ಕೃಷ್ಣ, ಸಾಯಿ ಕಿಶೋರ್ ತಲಾ 2 ವಿಕೆಟ್‌ ಉರುಳಿಸಿದರು.

ಸಿರಾಜ್ 100 ವಿಕೆಟ್‌ಗಳ ಸಾಧನೆ
ಈ ಪಂದ್ಯದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಮೊಹಮ್ಮದ್ ಸಿರಾಜ್ 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಿರಾಜ್, ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಹೈದರಾಬಾದ್ ಮೂಲದವರಾದ ಸಿರಾಜ್, ತಮ್ಮ ಸ್ಥಳೀಯ ನೆಚ್ಚಿನ ಮೈದಾನದಲ್ಲಿ ಮಾರಕ ದಾಳಿ ಸಂಘಟಿಸಿದ್ದರಲ್ಲದೆ ಕೇವಲ 17 ರನ್ ತೆತ್ತು ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಇದು ಐಪಿಎಲ್‌ನಲ್ಲಿ ಸಿರಾಜ್ ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.

ಅಂದ ಹಾಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಯಜುವೇಂದ್ರ ಚಾಹಲ್ ಅವರ ಹೆಸರಲ್ಲಿದೆ. ಚಾಹಲ್ ಒಟ್ಟು 206 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Share This Article