ಇಂದು RCB vs KKR ಪಂದ್ಯ – ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಾಂಬ್ ಸ್ಕ್ವಾಡ್‌ ಪರಿಶೀಲನೆ

By
2 Min Read

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ (India – Pakistan) ನಡುವಿನ ಉದ್ವಿಗ್ನತೆಯಿಂದಾಗಿ 1 ವಾರಗಳ ಕಾಲ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್ ಚುಟುಕು ಕ್ರಿಕೆಟ್ ಹಬ್ಬ ಇಂದಿನಿಂದ ಪುನರಾರಂಭವಾಗುತ್ತಿದೆ. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು (Chinnaswamy Stadium) ಆರ್‌ಸಿಬಿ-ಕೆಕೆಆರ್‌ ತಂಡಗಳು ಮುಖಾಮುಖಿಯಾಗಲಿವೆ. ಹಿಗಾಗಿ ಚಿನ್ನಸ್ವಾಮಿ ಅಂಗಳದಲ್ಲಿ ಅತಿಹೆಚ್ಚು ಜನ ಸೇರುವ ಹಿನ್ನೆಲೆ ಸ್ಟೇಡಿಯಂ ಸುತ್ತಮುತ್ತ ಭದ್ರತೆ ಪರಿಶೀಲಿಸಲಾಗಿದೆ.

ಇಂದಿನ ಪಂದ್ಯ ಕಿಂಗ್‌ ಕೊಹ್ಲಿ (Virat Kohli) ಅಭಿಮಾನಿಗಳಿಗೆ ತುಂಬಾನೇ ವಿಶೇಷ. ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಹಾಗಾಗಿ ಇಂದಿನ ಪಂದ್ಯದಲ್ಲಿ ಕೊಹ್ಲಿ ಮುಖ್ಯ ಆಕರ್ಷಣೆಯಾಗಿರಲಿದ್ದಾರೆ. ಇದರಿಂದ ಹೆಚ್ಚಿನ ಜನ ಸೇರುವ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಸ್ಟೇಡಿಯಂ ಸುತ್ತಮುತ್ತ ಇರುವ ಬೃಹತ್ ಮರಗಳನ್ನೂ ಪರಿಶೀಲಿಸಲಾಗಿದೆ.

ಗೆದ್ದರೆ ಪ್ಲೇ ಆಫ್‌ಗೆ
ಸದ್ಯ ಆಡಿರುವ 11 ಪಂದ್ಯಗಳಿಂದ 8 ಜಯ, 3 ಸೋಲು ಕಂಡಿರುವ ರಜತ್ ಪಾಟೀದಾರ್ ಸಾರಥ್ಯದ ಆರ್‌ಸಿಬಿ, +0.482 ನೆಟ್ ರನ್‌ರೇಟ್‌ನೊಂದಿಗೆ 16 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 16 ಅಂಕ ಪಡೆದಿರುವ ಗುಜರಾತ್ ಟೈಟನ್ಸ್ +0.793 ನೆಟ್ ರನ್‌ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಆರ್‌ಸಿಬಿಯು ಇಂದಿನ ಪಂದ್ಯವನ್ನು ಗೆದ್ದರೆ 18 ಅಂಕಗಳೊಂದಿಗೆ 18ನೇ ಆವೃತ್ತಿಯ ಐಪಿಎಲ್ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ. ಜೊತೆಗೆ 18 ಆವೃತ್ತಿಗಳಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶಿಸಿದ ಇತಿಹಾಸವನ್ನು ಆರ್‌ಸಿಬಿ ನಿರ್ಮಿಸಲಿದೆ.

ಅತ್ತ 12 ಪಂದ್ಯಗಳನ್ನಾಡಿರುವ ಅಜಿಂಕ್ಯಾ ರಹಾನೆ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್, 11 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸ್ಪರ್ಧೆಯನ್ನು ಜೀವಂತವಾಗಿಟ್ಟುಕೊಳ್ಳಬೇಕಾದರೆ 3 ಬಾರಿಯ ಚಾಂಪಿಯನ್ ಕೆಕೆಆರ್‌ಗೆ ಉತ್ತಮ ರನ್‌ರೇಟ್‌ನೊಂದಿಗೆ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಒಂದು ವೇಳೆ ಸೋತರೆ ಪ್ಲೇ ಆಫ್ ಸ್ಪರ್ಧೆಯಿಂದ ಹೊರಗುಳಿದ 4ನೇ ತಂಡವಾಗಲಿದೆ. ಹೀಗಾಗಿ ರಹಾನೆ ಬಳಗಕ್ಕೆ ಶನಿವಾರದ ಪಂದ್ಯ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ.

ಹಿಂದಿನ 4 ಪಂದ್ಯಗಳಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿರುವ ಆರ್‌ಸಿಬಿ, ತವರಿನಲ್ಲಿ 3ನೇ ಹಾಗೂ ಸತತ 5ನೇ ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ. ಅತ್ತ ತಾನಾಡಿದ ಹಿಂದಿನ 3 ಪಂದ್ಯಗಳಲ್ಲಿ 2 ಜಯ ಹಾಗೂ 1 ಸೋಲು ಕಂಡಿರುವ ಕೆಕೆಆರ್, ಪ್ಲೇ ಆಫ್ ಸ್ಪರ್ಧೆಯಲ್ಲಿ ಉಳಿಯಲು ಗೆಲುವಿನ ಅನಿವಾರ್ಯತೆಯನ್ನು ಎದುರಿಸುತ್ತಿದೆ.

ರಜತ್ ಪಾಟೀದಾರ್ ಲಭ್ಯ:
ಇನ್ನೂ ಹಿಂದಿನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಬೆರಳು ಗಾಯಕ್ಕೆ ಒಳಗಾಗಿದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಶುಕ್ರವಾರ ತಂಡದ ಅಭ್ಯಾಸದಲ್ಲಿ ಅವರು ಭರ್ಜರಿ ತಾಲೀಮು ನಡೆಸಿರುವುದು ತಂಡದ ದೊಡ್ಡ ಚಿಂತೆಯನ್ನು ದೂರ ಮಾಡಿದೆ.

Share This Article