ಪೂರನ್‌ ಬೆಂಕಿ ಆಟಕ್ಕೆ ಸನ್‌ರೈಸರ್ಸ್‌ ಬರ್ನ್‌ – ಲಕ್ನೋಗೆ 5 ವಿಕೆಟ್‌ಗಳ ಜಯ

Public TV
2 Min Read

ಹೈದರಾಬಾದ್: ನಿಕೋಲಸ್ ಪೂರನ್ ಬೆಂಕಿ ಬ್ಯಾಟಿಂಗ್‌ಗೆ ಸನ್‌ರೈಸರ್ಸ್‌ ಬರ್ನ್‌ ಆಗಿದೆ. ಹೈದರಾಬಾದ್‌ ವಿರುದ್ಧ ಲಕ್ನೋ 5 ವಿಕೆಟ್‌ಗಳ (SRH vs LSG) ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿತು. ಲಕ್ನೋ ಸೂಪರ್‌ ಜೈಂಟ್ಸ್‌ 16.1 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ – ಈ ಐಪಿಎಲ್‌ನಲ್ಲಿ ಪೂರನ್‌ ದಾಖಲೆ

ಪ್ಯಾಟ್‌ ಕಮ್ಮಿನ್ಸ್‌ ಪಡೆ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಅಬ್ಬರಿಸಿದಂತೆ ಕಾಣಲಿಲ್ಲ. ಉತ್ತಮ ಫಾರ್ಮ್‌ನಲ್ಲಿರುವ ಟ್ರಾವಿಸ್‌ ಹೆಡ್‌ ಆರಂಭಿಕ ಆಟ ಭರವಸೆ ಮೂಡಿಸಿತ್ತು. ಆದರೆ, ಅವರಿಗೆ ಸಾಥ್‌ ನೀಡುವಲ್ಲಿ ಇತರೆ ಬ್ಯಾಟರ್‌ಗಳು ವಿಫಲರಾದರು. ಹೆಡ್‌ 28 ಬಾಲ್‌ಗೆ 5 ಫೋರ್‌, 3 ಸಿಕ್ಸರ್‌ಗಳೊಂದಿಗೆ 47 ರನ್‌ ಗಳಿಸಿ ಔಟಾದರು. ಇದಕ್ಕೂ ಮುನ್ನ ಅಭಿಷೇಕ್‌ ಶರ್ಮಾ (6), ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್‌ ಕಿಶನ್‌ ಸೊನ್ನೆ ಸುತ್ತಿ ನಿರ್ಗಮಿಸಿದ್ದು, ನಿರಾಸೆ ಮೂಡಿಸಿತು.

ನಿತೀಶ್ ಕುಮಾರ್ ರೆಡ್ಡಿ 32, ಹೆನ್ರಿಕ್ ಕ್ಲಾಸೆನ್ 26, ಅನಿಕೇತ್ ವರ್ಮಾ 36, ಪ್ಯಾಟ್ ಕಮ್ಮಿನ್ಸ್ 18, ಹರ್ಷಲ್ ಪಟೇಲ್ 12 ರನ್‌ ಗಳಿಸಿದರು. ಲಕ್ನೋ ಪರ ಶಾರ್ದೂಲ್ ಠಾಕೂರ್ 4 ವಿಕೆಟ್‌ ಕಿತ್ತು ಗಮನ ಸೆಳೆದರು. ಆವೇಶ್ ಖಾನ್, ದಿಗ್ವೇಶ್ ರಥಿ, ರವಿ ಬಿಷ್ಣೋಯ್‌, ಪ್ರಿನ್ಸ್ ಯಾದವ್ ತಲಾ 1 ವಿಕೆಟ್‌ ಕಿತ್ತರು.

ಹೈದರಾಬಾದ್‌ ನೀಡಿದ 191 ರನ್‌ ಗುರಿ ಬೆನ್ನತ್ತಿದ ಲಕ್ನೋಗೆ 4 ರನ್‌ ಇರುವಾಗಲೇ ಐಡೆನ್ ಮಾರ್ಕ್ರಾಮ್ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿದ್ದು, ಆರಂಭಿಕ ಆಘಾತ ನೀಡಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ ತಂಡದ ಗೆಲುವನ್ನು ಖಚಿತಪಡಿಸಿತು. ಮಾರ್ಷ್‌ 31 ಬಾಲ್‌ಗೆ 52 ರನ್‌ (7 ಫೋರ್‌, 2 ಸಿಕ್ಸರ್)‌ ಸಿಡಿಸಿ ತಂಡಕ್ಕೆ ನೆರವಾದರು. ಪೂರನ್‌ ಹೊಡಿಬಡಿ ಆಟದಿಂದ ಗಮನ ಸೆಳೆದರು. ಕೇವಲ 26 ಬಾಲ್‌ಗೆ 6 ಫೋರ್‌ ಮತ್ತು 6 ಸಿಕ್ಸರ್‌ನೊಂದಿಗೆ 70 ರನ್‌ ಕಲೆಹಾಕಿ ಅಬ್ಬರಿಸಿದರು.

ಕಳೆದ ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದ ಕ್ಯಾಪ್ಟನ್‌ ರಿಷಬ್‌ ಪಂತ್‌ (15) ಇಂದು ಸಾಮಾಧಾನಕರ ಆಟ ಆಡದರು. ಡೇವಿಡ್ ಮಿಲ್ಲರ್ 13, ಅಬ್ದುಲ್ ಸಮದ್ 22 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Share This Article