IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್‌ ಮ್ಯಾಚ್‌

Public TV
1 Min Read

ನವದೆಹಲಿ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಕ್ವಾಲಿಫೈಯರ್-2 ಪಂದ್ಯಕ್ಕೂ ಅಹಮದಾಬಾದ್‌ನ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ.

ಕ್ವಾಲಿಫೈಯರ್-1 ಮತ್ತು ಎಲಿಮೀನೇಟರ್ ಪಂದ್ಯಗಳು ಮುಲ್ಲನ್‌ಪುರದ ಕ್ರೀಡಾಂಗಣದಲ್ಲಿ ಮೇ 29 ಮತ್ತು ಮೇ 30ರಂದು ನಡೆಯಲಿದೆ. ಜೂನ್ 3ಕ್ಕೆ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಮಳೆಯ ಕಾರಣಕ್ಕೆ ಮೇ 23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ.

ಹಿಂದಿನ ವೇಳಾಪಟ್ಟಿ ಪ್ರಕಾರ, ಕ್ವಾಲಿಫೈಯರ್-1 ಮತ್ತು ಎಲಿಮೀನೆಟರ್ ಪಂದ್ಯಗಳು ಹೈದರಾಬಾದ್‌ನಲ್ಲಿ, ಕ್ವಾಲಿಫೈಯರ್-2 ಮತ್ತು ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷದಿಂದ ಪಂದ್ಯಗಳು ಮುಂದೂಡಲ್ಪಟ್ಟಿದ್ದರಿಂದ ವೇಳಾಪಟ್ಟಿಯಲ್ಲಿ ಪರಿಷ್ಕರಣೆಯಾಗಿದೆ.

ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿಯು ಪ್ಲೇ-ಆಫ್ ಪಂದ್ಯಗಳಿಗೆ ಹೊಸ ಸ್ಥಳಗಳನ್ನು ನಿಗದಿಪಡಿಸಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

Share This Article