ಈ ಬಾರಿ ಕಳೆಯಲಿದೆಯೇ ಫೈನಲ್‌ ಕಂಟಕ? – ಕಪ್‌ ಗೆದ್ದು ಅಭಿಮಾನಿಗಳಿಗೆ ಔತಣ ಕೊಡಲಿದೆಯೇ ಆರ್‌ಸಿಬಿ?

Public TV
3 Min Read

ರ್‌ಸಿಬಿ (RCB) ತಂಡ ಕಳೆದ 17  ಆವೃತ್ತಿಯಲ್ಲಿ ಮೂರು ಬಾರಿ ಫೈನಲ್‌ ತಲುಪಿ ಕೊನೆಯ ಹಂತದಲ್ಲಿ ಮುಗ್ಗರಿಸಿ, ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿತ್ತು. ಆದರೂ ಆರ್‌ಸಿಬಿಯ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ತಂಡವನ್ನು ಬಿಟ್ಟುಕೊಡದೇ ಇಂದಿಗೂ ಬೆಂಬಲಿಸಿಕೊಂಡೇ ಬಂದಿದ್ದಾರೆ. ಅದೇ ಅಭಿಮಾನಿಗಳ ಆಶೀರ್ವಾದದಿಂದ ಈ ಬಾರಿ ಮತ್ತೆ ಆರ್‌ಸಿಬಿ ಫೈನಲ್‌ಗೆ ತಲುಪಿದೆ.

ಫೈನಲ್‌ಗೆ ಆರ್‌ಸಿಬಿ ತಂಡ ಪ್ರವೇಶಿಸುತ್ತಿದ್ದಂತೆ, ʻಈ ಸಲ ಕಪ್‌ ನಮ್ದೇʼ ಎಂಬ ಆರ್‌ಸಿಬಿಯ 18 ವರ್ಷಗಳ ಘೋಷವಾಕ್ಯಕ್ಕೆ ಮತ್ತೆ ಬಲ ಬಂದಿದೆ! ಈ ಸೋಲುಗಳ ಸರಣಿ ಮೂರಕ್ಕೆ ಅಂತ್ಯವಾಗಿ, ಈ ಬಾರಿಯಾದರೂ ಕಪ್‌ ಗೆಲ್ಲಲಿ ಎಂಬುದು ಅಭಿಮಾನಿಗಳ ಹೆಬ್ಬಯಕೆ. ಈ ಬಾರಿ ಕೋಟ್ಯಂತರ ಅಭಿಮಾನಿಗಳ ಕನಸು ನೆರವೇರುವ ನಿರೀಕ್ಷೆ ಸಹ ಇದೆ. ಇದನ್ನೂ ಓದಿ: ಫೈನಲ್‌ನಲ್ಲಿ ಸೆಣೆಸಲಿರುವ ಆರ್‌ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ!

ಆರ್‌ಸಿಬಿ ಮೂರು ಬಾರಿ ಕಪ್‌ಗಾಗಿ ಸೆಣೆಸಾಡಿದ್ದು ಹೀಗೆ
2009: ಆರ್‌ಸಿಬಿ ಮೊದಲ ಸಲ ಫೈನಲ್ ಪ್ರವೇಶಿಸಿದ್ದು 2009ರಲ್ಲಿ. ಅದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಡೆಕ್ಕನ್ ಚಾರ್ಜರ್ಸ್ ಎದುರಿನ ಹೋರಾಟ, ಲೀಗ್‌ನಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಆರ್‌ಸಿಬಿ 3ನೇ ಸ್ಥಾನಿಯಾಗಿತ್ತು. ಪಂದ್ಯದಲ್ಲಿ ಸ್ವತಃ ಅನಿಲ್ ಕುಂಬ್ಳೆ 4 ವಿಕೆಟ್ ಉರುಳಿಸಿದ್ದರು. ಡೆಕ್ಕನ್ ಚಾರ್ಜರ್ಸ್ ತಂಡದ ಮೊತ್ತವನ್ನು 6 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತ್ತು. ಆರ್‌ಸಿಬಿಗೆ ಈ ಸಾಮಾನ್ಯ ಗುರಿಯನ್ನೂ ತಲುಪಲು ಸಾಧ್ಯವಾಗಿರಲಿಲ್ಲ. 9 ವಿಕೆಟ್‌ ನಷ್ಟಕ್ಕೆ 137 ರನ್ ಮಾಡಿ ಕಪ್ ಕಳೆದುಕೊಂಡಿತ್ತು.

2011: ಆರ್‌ಸಿಬಿ 2011 ರಲ್ಲಿ2ನೇ ಸಲ ಫೈನಲ್ ಪ್ರವೇಶಿಸಿತ್ತು. ಲೀಗ್‌ನಲ್ಲಿ ಆರ್‌ಸಿಬಿ 19 ಅಂಕ ಗಳಿಸಿ ಅಗ್ರಸ್ಥಾನದಲ್ಲಿತ್ತು. ಚೆನ್ನೈನಲ್ಲಿ ಎದುರಾಳಿ ಚೆನ್ನೈ ತಂಡವನ್ನು ಎದುರಿಸಿತ್ತು. ಬ್ಯಾಟಿಂಗ್ ವೈಫಲ್ಯದಿಂದ ಆರ್‌ಸಿಬಿ ಕಪ್‌ ಕೈಚೆಲ್ಲಿತ್ತು. ಚೆನ್ನೈ 5 ವಿಕೆಟ್‌ ನಷ್ಟಕ್ಕೆ 205 ರನ್ ಪೇರಿಸಿದರೆ, ಡೇನಿಯಲ್ ವೆಟೋರಿ ನಾಯಕತ್ವದಲ್ಲಿ ಆಟಕ್ಕಿಳಿದ ಆರ್‌ಸಿಬಿ 8 ವಿಕೆಟ್‌ ನಷ್ಟಕ್ಕೆ 147 ರನ್ ಮಾತ್ರ ಗಳಿಸಿತ್ತು. ಇದನ್ನೂ ಓದಿ: ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್‌ – ಹಿಂದಿನ ಆರ್‌ಸಿಬಿ, ಪಂಜಾಬ್‌ ಫೈನಲ್‌ ಪಂದ್ಯಗಳು ಹೇಗಿತ್ತು?

2016: ಆರ್‌ಸಿಬಿ 3ನೇ ಸಲ ಫೈನಲ್ ತಲುಪಿದ್ದು 2016ರಲ್ಲಿ. ತವರಿನಲ್ಲೇ ನಡೆದ ಪಂದ್ಯವಾದ್ದರಿಂದ ಆರ್‌ಸಿಬಿ ಮೇಲೆ ಅಭಿಮಾನಿಗಳು ಭಾರೀ ಭರವಸೆ ಇಟ್ಟಿದ್ದರು. ಆದರೆ ಇಲ್ಲಿಯೂ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಾಗಿತ್ತು. ಹೈದರಾಬಾದ್ 7 ವಿಕೆಟ್‌ಗೆ 208 ರನ್ ಗಳಿಸಿದರೆ, ಆರ್‌ಸಿಬಿ ಅಂತಿಮವಾಗಿ 7‌ ವಿಕೆಟ್‌ಗೆ 200 ರನ್ನಷ್ಟೇ ಗಳಿಸಿ ಶರಣಾಗಿತ್ತು.

2025: ಈ ಬಾರಿ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಕೆಕೆಆರ್‌ನ ಅತಿ ದೊಡ್ಡ ಗೆಲುವಿನ ಅಂತರದ ದಾಖಲೆಯನ್ನು ಆರ್‌ಸಿಬಿ ಬ್ರೇಕ್‌ ಮಾಡಿದೆ. ಆ ಮೂಲಕ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿತು. ಪಂಜಾಬ್ ನೀಡಿದ 102 ರನ್‌ಗಳ ಸಾಧಾರಣ ಗುರಿಯನ್ನು ಆರ್‌ಸಿಬಿ 10 ಓವರ್‌ನಲ್ಲೇ ತಲುಪಿತು. ಇನ್ನೂ 60 ಎಸೆತಗಳು ಬಾಕಿ ಇರುವಾಗಲೇ ಗುರಿ ಮುಟ್ಟಿ ಆರ್‌ಸಿಬಿ ಗೆದ್ದು ಬೀಗಿತ್ತು.

ಕಳೆದ 18 ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಟ್ರೋಫಿ ಗೆದ್ದುಕೊಂಡಿಲ್ಲ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್‌ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್‌ ಕಿಂಗ್ಸ್‌ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ. ಲೀಗ್‌ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ತಂಡವನ್ನು ಸೋಲಿಸಿ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ. ಹೀಗಾಗಿ ಇಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ತಂಡ ಈ ಹಿಂದೆ ಆಡಿದ ಫೈನಲ್‌ ಪಂದ್ಯಗಳ ಕಿರು ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಈ ವರ್ಷ ಟ್ರೋಫಿ ಗೆಲ್ಲೋಕೆ ಶ್ರೇಯಸ್‌ ಅಯ್ಯರ್‌ ಅರ್ಹರು – ರಾಜಮೌಳಿ

Share This Article