ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ಗೆ 11 ರನ್‌ಗಳ ರೋಚಕ ಗೆಲುವು

Public TV
1 Min Read

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ 11 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ ನಿಗದಿತ ಓವರ್‌ಗಳಲ್ಲಿ 232 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಗುಜರಾತ್‌ ಪರ ಸಾಯಿ ಸುದರ್ಶನ್‌ 41 ಎಸೆತಗಳಲ್ಲಿ 6 ಸಿಕ್ಸರ್‌, 4 ಬೌಂಡರಿ ನೆರವಿಂದ 74 ರನ್, ಜೋಸ್ ಬಟ್ಲರ್ 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 54 ರನ್‌ ಕಲೆ ಹಾಕಿದರು. ಶೆರ್ಫೇನ್ ರುದರ್ಫೋರ್ಡ್ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ ಸಿಡಿಸಿ ತಂಡಕ್ಕೆ 46 ರನ್‌ ಕೊಡುಗೆ ಕೊಟ್ಟರು. ಶುಭಮನ್‌ ಗಿಲ್‌ 14 ಎಸೆತಗಳಲ್ಲಿ 3 ಸಿಕ್ಸರ್‌, 2 ಬೌಂಡರಿ ನೆರವಿಂದ 33 ರನ್‌ ಗಳಿಸಿದರು.

ಪಂಜಾಬ್ ಪರ ಅರ್ಶದೀಪ್‌ ಸಿಂಗ್‌2 ವಿಕೆಟ್‌, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಕೇವಲ 42 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿ, ಅಜೇಯರಾಗಿ ಉಳಿದರು. ಈ ಮೂಲಕ ಕೇವಲ 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಪ್ರಿಯಾಂಶ್ ಆರ್ಯ 23 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 47 ರನ್ ಕಲೆಹಾಕಿದರು. ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 44 ರನ್ ಗಳಿಸಿ ಅಜೇಯರಾಗಿ ಉಳಿದರು.

ಗುಜರಾತ್ ಪರ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ, ಕಾಗಿಸೋ ರಬಾಡಾ ಮತ್ತು ರಷೀದ್ ಖಾನ್ ತಲಾ 1 ವಿಕೆಟ್ ಉರುಳಿಸಿದರು.

Share This Article