ಕನ್ನಡಿಗನ ಆರ್ಭಟಕ್ಕೆ ಚೆನ್ನೈ ಚಿಂದಿ, ರಾಹುಲ್‌ ಅಮೋಘ ಅರ್ಧಶತಕ – ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್‌ ಗೆಲುವು

Public TV
4 Min Read

ಚೆನ್ನೈ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪೇಲವ ಪ್ರದರ್ಶನ, ಕಳಪೆ ಬೌಲಿಂಗ್‌ ಪ್ರದರ್ಶನಕ್ಕೆ ಸಿಎಸ್‌ಕೆ (CSK) ಬೆಲೆ ತೆತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೀನಾಯ ಸೋಲು ಕಂಡಿದೆ. ಅತ್ತ ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 25 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಹ್ಯಾಟ್ರಿಕ್‌ ಜಯ ಸಾಧಿಸಿದೆ. ಇದು ಚೆನ್ನೈ ವಿರುದ್ಧ ತವರು ಕ್ರೀಡಾಂಗಣದಲ್ಲಿ 15 ವರ್ಷಗಳ ಬಳಿಕ ಸಂದ ಮೊದಲ ಜಯವಾಗಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 183 ರನ್‌ ಕಲೆಹಾಕಿತ್ತು. 184 ರನ್‌ಗಳ ಗುರಿ ಬೆನ್ನತ್ತಿದ ಸಿಎಸ್‌ಕೆ 20 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

ಕಳಪೆ ಬ್ಯಾಟಿಂಗ್‌:
ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಸಿಎಸ್‌ಕೆ ಪವರ್‌ ಪ್ಲೇನಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ರನ್‌ ಕಲೆಹಾಕುವಲ್ಲಿಯೂ ಎಡವಿತು. ಅಲ್ಲದೇ ಮಧ್ಯಮ ಕ್ರಮಾಂಕದ ನಿಧಾನಗತಿಯ ಬ್ಯಾಟಿಂಗ್‌ ತಂಡಕ್ಕೆ ದೊಡ್ಡ ಪೆಟ್ಟು ನೀಡಿತು. ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಿಗಿ ಬೌಲಿಂಗ್‌, ಫೀಲ್ಡಿಂಗ್‌ ಹಿಡಿತಕ್ಕೆ ರನ್‌ ಕದಿಲು ತಿಣುಕಾಡಿದ ಸಿಎಸ್‌ಕೆ ಹೀನಾಯ ಸೋಲಿಗೆ ತುತ್ತಾಯಿತು.

ಸಿಎಸ್‌ಕೆ ಪರ ವಿಜಯ್‌ ಶಂಕರ್‌ ಅಜೇಯ 69 ರನ್‌ (54 ಎಸೆತ, 5 ಬೌಂಡರಿ, 1 ಸಿಕ್ಸರ್)‌, ಧೋನಿ (MS Dhoni) ಅಜೇಯ 30 ರನ್‌, ಶಿವಂ ದುಬೆ 18 ರನ್‌, ಡಿವೋನ್‌ ಕಾನ್ವೆ 13 ರನ್‌, ರಚಿನ್‌ ರವೀಂದ್ರ 3 ರನ್‌, ರುತುರಾಜ್‌ ಗಾಯಕ್ವಾಡ್‌ 5 ರನ್‌, ರವೀಂದ್ರ ಜಡೇಜಾ 2 ರನ್‌ ಗಳಿಸಿದ್ರೆ ವೈಡ್‌ ನೋಬಾಲ್‌ನಿಂದಲೇ ತಂಡಕ್ಕೆ ಹೆಚ್ಚುವರಿ 18 ರನ್‌ ಸೇರ್ಪಡೆಯಾಯಿತು.

ಡೆಲ್ಲಿ ಪರ ವಿಪ್ರಜ್‌ ನಿಗಮ್‌ 2 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಮುಕೇಶ್‌ ಕುಮಾರ್‌, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಆರಂಭದಿಂದಲೇ ಡೆಲ್ಲಿ ಆರ್ಭಟ:
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸಿಎಸ್‌ಕೆ ಬೌಲರ್‌ಗಳ ವಿರುದ್ಧ ಆಕ್ರಮಣ ಕಾರಿ ಬ್ಯಾಟಿಂಗ್‌ ಮಾಡಿತು. ಆರಂಭಿಕನಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್‌ ರಾಹುಲ್‌ ಅಮೋಘ ಅರ್ಧಶತಕ ಸಿಡಿಸುವ ಮೂಲಕ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು.

ತಂಡ ಬದಲಾದ ತಕ್ಷಣ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರ ಆಟವೂ ಸಂಪೂರ್ಣವಾಗಿ ಬದಲಾದಂತೆ ಕಾಣುತ್ತಿದೆ. ಕಳೆದ ಕೆಲವು ಸೀಸನ್​ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕರಾಗಿದ್ದಾಗ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಟೀಕೆಗಳನ್ನು ಎದುರಿಸಿದ್ದ ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್ (DC) ಸೇರಿದ ತಕ್ಷಣ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಐಪಿಎಲ್ 2025 ರಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಸಣ್ಣ ಆದರೆ ಸ್ಫೋಟಕ ಇನ್ನಿಂಗ್ಸ್ ಆಡಿದ ರಾಹುಲ್, ಎರಡನೇ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಗಳಿಸಿದರು. ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಸಿಡಿಸಿದರು.

ರಾಹುಲ್ ಸ್ಫೋಟಕ ಅರ್ಧಶತಕ
2022ರಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಪ್ರತಿನಿಧಿಸಿದ್ದ ಕೆ.ಎಲ್‌ ರಾಹುಲ್‌ ಸತತ 2 ಬಾರಿ ತಂಡವನ್ನ ಪ್ಲೇ ಆಫ್‌ ಪ್ರವೇಶಿಸುವಂತೆ ಮಾಡಿದ್ದರು. ಆದ್ರೆ 3ನೇ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಫ್ರಾಂಚೈಸಿ ಅವರನ್ನ ಕೈಬಿಟ್ಟಿತು. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೆ.ಎಲ್‌ ರಾಹುಲ್‌ ಇದೀಗ ಐಪಿಎಲ್‌ನಲ್ಲೂ ಅಬ್ಬರಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ ಮೊದಲ ಪಂದ್ಯದಲ್ಲಿ ಕೇವಲ ಎಸೆತಗಳಲ್ಲಿ 15 ರನ್‌ ಚಚ್ಚಿದ್ದ ರಾಹುಲ್‌ 2ನೇ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಈ ಆವೃತ್ತಿಯಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು.

ಫಾಫ್‌ ಡು ಪ್ಲೆಸಿ ಗಾಯದ ಸಮಸ್ಯೆಯಿಂದ ಹೊರಗುಳಿದ ಕಾರ ಕೆ.ಎಲ್‌ ರಾಹುಲ್ ಇನ್ನಿಂಗ್ಸ್ ಆರಂಭಿಸಬೇಕಾಯಿತು. ಅಂತಹ ಪರಿಸ್ಥಿತಿಯಲ್ಲಿ, ರಾಹುಲ್ ತನ್ನ ಹಳೆಯ ಇಮೇಜ್ ಅನ್ನು ಮುರಿದು ಪವರ್‌ಪ್ಲೇನಲ್ಲಿ ಸ್ಫೋಟಕ ಆರಂಭವನ್ನು ನೀಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದವು. ಚೆನ್ನೈನಲ್ಲಿ ಬಿಸಿಲಿನ ಮಧ್ಯಾಹ್ನ ಮೊದಲು ಬ್ಯಾಟಿಂಗ್ ಮಾಡಿದ ರಾಹುಲ್ ತಮ್ಮ ತಂಡ ಮತ್ತು ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಮೊದಲ 6 ಓವರ್‌ಗಳಲ್ಲಿ ರಾಹುಲ್ ಕೇವಲ 13 ಎಸೆತಗಳನ್ನು ಎದುರಿಸುವ ಅವಕಾಶ ಪಡೆದರು, ಅದರಲ್ಲಿ ಅವರು 19 ರನ್ ಗಳಿಸಿದರು. ಇದಾದ ನಂತರ ಗೇರ್ ಬದಲಿಸಿದ ರಾಹುಲ್ ಈ ಆವೃತ್ತಿಯ ಮೊದಲ ಅರ್ಧಶತಕವನ್ನು ದಾಖಲಿಸಿದರು.

ಡೆಲ್ಲಿ ಪರ ರಾಹುಲ್ 33 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಾಯದಿಂದ ತಮ್ಮ ಮೊದಲ ಅರ್ಧಶತಕ ಸಿಡಿಸಿದರು. 20ನೇ ಓವರ್‌ನಲ್ಲಿ ಔಟಾದ ರಾಹುಲ್ 77 ರನ್ (51, 6 ಬೌಂಡರಿ, 3 ಸಿಕ್ಸರ್)‌ ರನ್‌ ಗಳಿಸಿದರು. ರಾಹುಲ್ ಹೊರತುಪಡಿಸಿ, ಅಭಿಷೇಕ್ ಪೊರೆಲ್ 33 ರನ್, ಅಕ್ಷರ್ ಪಟೇಲ್ 21 ರನ್‌, ಸಮೀರ್‌ ರಿಜ್ವಿ 20 ರನ್‌, ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 24 ರನ್‌, ಅಶುತೋಷ್‌ ಶರ್ಮಾ ಹಾಗೂ ವಿಪ್ರಜ್‌ ನಿಗಮ್‌ ತಲಾ ಒಂದೊಂದು ರನ್‌ ಗಳಿಸಿದರು.

ಸಿಎಸ್‌ಕೆ ಪರ ಖಲೀಲ್‌ ಅಹ್ಮದ್‌ 2 ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜಾ, ನೂರ್‌ ಅಹ್ಮದ್‌, ಮಥೀಶ ಪತಿರಣ, ತಲಾ ಒಂದೊಂದು ವಿಕೆಟ್‌ ಕಿತ್ತರು.

Share This Article