ಈ ಬಾರಿ ಐಪಿಎಲ್‌ನಲ್ಲಿ ಹೊಸ ಚಾಂಪಿಯನ್‌ – ಹಿಂದಿನ ಆರ್‌ಸಿಬಿ, ಪಂಜಾಬ್‌ ಫೈನಲ್‌ ಪಂದ್ಯಗಳು ಹೇಗಿತ್ತು?

Public TV
3 Min Read

ಅಹಮದಾಬಾದ್‌: ಈ ಬಾರಿ ಐಪಿಎಲ್‌ನಲ್ಲಿ (IPL 2025) ಹೊಸ ಚಾಂಪಿಯನ್ ತಂಡದ ಉದಯವಾಗಲಿದೆ. ಅಷ್ಟೇ ಅಲ್ಲದೇ ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ (RCB) ಮತ್ತು ಪಂಜಾಬ್‌ (Punjab Kings) 4 ಬಾರಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ವಿಶೇಷ.

ಕಳೆದ 18 ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಪಂಜಾಬ್‌ ಕಿಂಗ್ಸ್‌ ಟ್ರೋಫಿ ಗೆದ್ದುಕೊಂಡಿಲ್ಲ. ಆರ್‌ಸಿಬಿ ಈ ಮೊದಲು 3 ಬಾರಿ ಫೈನಲ್‌ ಪ್ರವೇಶಿಸಿದ್ದರೆ ಪಂಜಾಬ್ ಒಂದು ಬಾರಿ ಫೈನಲ್ ಆಡಿ ಸೋಲನುಭವಿಸಿತ್ತು. 2014 ರಲ್ಲಿ ಕೋಲ್ಕತ್ತಾ ವಿರುದ್ಧ ಪಂಜಾಬ್‌ ಕಿಂಗ್ಸ್‌ ಸೋತಿತ್ತು. ಇದೇ ಮೊದಲ ಬಾರಿಗೆ ಎರಡು ತಂಡಗಳು ಫೈನಲಿನಲ್ಲಿ ಮುಖಾಮುಖಿಯಾಗುತ್ತಿವೆ.

ಲೀಗ್‌ ಹಂತದಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದುಕೊಂಡಿದ್ದವು. ಆದರೆ ಕ್ವಾಲಿಫೈಯರ್‌ನಲ್ಲಿ ಪಂಜಾಬ್‌ ತಂಡವನ್ನು ಸೋಲಿಸಿ ಆರ್‌ಸಿಬಿ ಫೈನಲ್‌ ಪ್ರವೇಶಿಸಿತ್ತು. ಹೀಗಾಗಿ ಎರಡು ತಂಡಗಳ ಮಧ್ಯೆ ಸಮಬಲದ ಹೋರಾಟ ನಡೆಯಲಿದೆ. ಹೀಗಾಗಿ ಇಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ತಂಡ ಈ ಹಿಂದೆ ಆಡಿದ ಫೈನಲ್‌ ಪಂದ್ಯಗಳ ಕಿರು ಮಾಹಿತಿಯನ್ನು ನೀಡಲಾಗಿದೆ.  ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

2009 – ಫೈನಲ್‌ನಲ್ಲಿ ವಿರೋಚಿತ ಸೋಲು
2009ರ ಆವೃತ್ತಿಯಲ್ಲೂ 8 ತಂಡಗಳು ಭಾಗವಹಿಸಿದ್ದವು. 2ನೇ ಆವೃತ್ತಿಯಲ್ಲಿ ಆರ್‌ಸಿಬಿ ಪುಟಿದೆದ್ದಿತ್ತು. 14 ಪಂದ್ಯಗಳಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕ ಗಳಿಸಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆಗ ಎಲಿಮಿನೇಟರ್ ಪಂದ್ಯ ಇರಲಿಲ್ಲ, 2 ಸೆಮಿಫೈನಲ್ ಪಂದ್ಯಗಳು ಮಾತ್ರ ಇದ್ದವು. ಮೊದಲ ಸೆಮಿಫೈನಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ (ಇಂದಿನ ಡೆಲ್ಲಿ ಕ್ಯಾಪಿಟಲ್ಸ್), ಹೈದರಾಬಾದ್ ಡೆಕ್ಕನ್ ಚಾರ್ಜಸ್ ಕಾದಾಟ ನಡೆಸಿದ್ರೆ, 2ನೇ ಸೆಮಿಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಈ ವೇಳೆ ಸೆಮಿಸ್‌ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 6 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಟ್ರೋಫಿ ಗೆಲ್ಲುವ ಕನಸೂ ಕಮರಿತ್ತು.

2011 ಚೆನ್ನೈ ವಿರುದ್ಧ ಎರಡು ಬಾರಿ ಸೋಲು
2011ರ ಆವೃತ್ತಿ ಆರ್‌ಸಿಬಿ ಪಾಲಿಗೆ ಅತ್ಯಂತ ರೋಚಕ ಘಟ್ಟ. ಲೀಗ್ ಸುತ್ತಿನಲ್ಲಿ 14ರಲ್ಲಿ 9 ಪಂದ್ಯ ಗೆದ್ದು ಪ್ಲೇ ಆಫ್ ಪ್ರವೇಶಿಸಿತ್ತು. ಈ ವೇಳೆಗೆ ಪ್ಲೇ ಆಫ್ ಸ್ವರೂಪ ಸಂಪೂರ್ಣ ಬದಲಾಗಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಚೆನ್ನೈ ವಿರುದ್ಧ 6 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿಗೆ ಮತ್ತೊಂದು ಅವಕಾಶ ಸಿಕ್ಕಿತ್ತು. ಆಗ 2ನೇ ಕಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಕಂಡಿದ್ದ ಆರ್‌ಸಿಬಿ ಪುನಃ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 58 ರನ್‌ಗಳಿಂದ ಸೋಲು ಕಂಡಿತ್ತು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಸತತ 2ನೇ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಇದನ್ನೂ ಓದಿ:ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

2016 – 8 ರನ್‌ಗಳಿಂದ  ಸೋಲು
2016 ಐಪಿಎಲ್ ಆವೃತ್ತಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಅಂಕಪಟ್ಟಿಯಲ್ಲಿ ಟಾಪ್-2 ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಫೈನಲ್ ತಲುಪಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತ್ತು. ಆದ್ರೆ ಚೇಸಿಂಗ್ ಮಾಡಿದ್ದ ಆರ್‌ಸಿಬಿ ಕ್ರಿಸ್‌ಗೇಲ್ ಮತ್ತು ಕಿಂಗ್ ಕೊಹ್ಲಿ ಆರ್ಭಟದ ಹೊರತಾಗಿ 8 ರನ್‌ಗಳ ವಿರೋಚಿತ ಸೋಲು ಅನುಭವಿಸಿತು. ಆಗ ಸನ್ ರೈಸರ್ಸ್ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು.

2014 – ಕೋಲ್ಕತ್ತಾ ವಿರುದ್ಧ ಸೋಲು
ಅಂಕಪಟ್ಟಿಯಲ್ಲಿ 22 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದ ಪಂಜಾಬ್‌ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಮೊದಲು ಬ್ಯಾಟ್‌ ಬೀಸಿದ್ದ ಪಂಜಾಬ್‌ 4 ವಿಕೆಟ್‌ ನಷ್ಟಕ್ಕೆ 199 ರನ್‌ ಹೊಡೆದಿತ್ತು. ವೃದ್ಧಿಮಾನ್‌ ಸಹ ಅಜೇಯ 115 ರನ್‌ ಹೊಡೆದಿದ್ದರು. ನಂತರ ಬ್ಯಾಟ್‌ ಬೀಸಿದ್ದ ಕೋಲ್ಕತ್ತಾ ಇನ್ನೂ 3 ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ ನಷ್ಟಕ್ಕೆ 200 ರನ್‌ ಹೊಡೆದು ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಕೋಲ್ಕತ್ತಾ ಪರ ಕನ್ನಡಿಗ ಮನೀಷ್‌ ಪಾಂಡೆ 50 ಎಸೆತಗಳಲ್ಲಿ 94 ರನ್‌ ಹೊಡೆದಿದ್ದರು. ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪಂಜಾಬ್‌ನ ಮ್ಯಾಕ್ಸ್‌ವೆಲ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

Share This Article