ಧೋನಿ ಟೀಂಗೆ 2 ವಿಕೆಟ್‌ಗಳ ರೋಚಕ ಜಯ – ಕೆಕೆಆರ್‌ ಪ್ಲೇ-ಆಫ್‌ ಕನಸು ಭಗ್ನ

Public TV
2 Min Read

ಕೋಲ್ಕತ್ತಾ: ಐಪಿಎಲ್‌ 2025 ಆವೃತ್ತಿಯಿಂದ ಮನೆ ಕಡೆ ಹೆಜ್ಜೆ ಹಾಕಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬುಧವಾರದ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪ್ಲೇ-ಆಫ್‌ ಆಸೆ ಹೊತ್ತಿದ್ದ ಕೋಲ್ಕತ್ತಾ ನೈಟ್‌ ರೈಡರ್ಸ್‌ಗೆ ಕನಸನ್ನು ಧೋನಿ ಪಡೆ ಭಗ್ನಗೊಳಿಸಿದೆ.

ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಂ.ಎಸ್.ಧೋನಿ ಪಡೆ ಕೋಲ್ಕತ್ತಾ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ರಹಾನೆ ಪಡೆ 20 ಓವರ್‌ಗೆ 6 ವಿಕೆಟ್‌ ನಷ್ಟಕ್ಕೆ 179 ರನ್‌ ಕಲೆ ಹಾಕಿತು. 180 ರನ್‌ ಗುರಿ ಬೆನ್ನತ್ತಿದ ಸಿಎಸ್‌ಕೆ 19.4 ಓವರ್‌ಗೆ 8 ವಿಕೆಟ್‌ ಕಳೆದುಕೊಂಡು ಗುರಿ ತಲುಪಿ ಗೆಲುವು ದಾಖಲಿಸಿತು.

ಕೆಕೆಆರ್‌ ಪರ ಅಜಿಂಕ್ಯಾ ರಹಾನೆ 48, ಮನಿಶ್‌ ಪಾಂಡೆ (ಔಟಾಗದೇ) 36, ಆಂಡ್ರೆ ರಸೆಲ್‌ 38 ರನ್‌ ಗಳಿಸಿದ್ದು ಬಿಟ್ಟರೆ ಉಳಿದಂತೆ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ 11, ಸುನಿಲ್‌ ನರೇನ್‌ 26 ರನ್‌ ಗಳಿಸಲಷ್ಟೇ ಶಕ್ತರಾದರು. ಉಳಿದಂತೆ ಬ್ಯಾಟರ್‌ಗಳು ಕಳಪೆ ಪ್ರದರ್ಶನ ತೋರಿದರು.

ಚೆನ್ನೈ ಪರ ನೂರ್‌ ಅಹ್ಮದ್‌ ಮಿಂಚಿದರು. 4 ಓವರ್‌ಗೆ 31 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಬಳಿಸಿದರು. ಅನ್ಶುಲ್ ಕಾಂಬೋಜ್, ರವೀಂದ್ರ ಜಡೇಜಾ ತಲಾ 1 ವಿಕೆಟ್‌ ಪಡೆದರು.

ನಂತರ ಬ್ಯಾಟಿಂಗ್‌ ಮಾಡಿದ ಧೋನಿ ಪಡೆಗೆ ಆರಂಭಿಕ ಆಘಾತ ಎದುರಾಯಿತು. ಮೊದಲನೇ ಓವರ್‌ನ 2ನೇ ಬಾಲ್‌ಗೆ ಆಯುಷ್ ಮ್ಹಾತ್ರೆ ಶೂನ್ಯ ಸುತ್ತಿ ವಿಕೆಟ್‌ ಒಪ್ಪಿಸಿದರು. ತಂಡದ ಮೊತ್ತ 25 ರನ್‌ ಇರುವಾಗಲೇ ಚೆನ್ನೈ 2 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು.

ಆಗ ತಂಡಕ್ಕೆ ಆಸರೆಯಾಗಿ ಉರ್ವಿಲ್ ಪಟೇಲ್ (31 ರನ್) ಕಾಣಿಸಿಕೊಂಡರು. ಈ ನಡುವೆ ಆರ್‌.ಅಶ್ವಿನ್‌ ಕೇವಲ 8 ರನ್‌ಗೆ ಔಟಾದರು. ರವೀಂದ್ರ ಜಡೇಜಾ 19 ರನ್‌ ಅಷ್ಟೇ ಗಳಿಸಿದರು. ಸೋಲಿನ ಭೀತಿಯಲ್ಲಿದ್ದ ತಂಡಕ್ಕೆ ಡೆವಾಲ್ಡ್ ಬ್ರೆವಿಸ್ ಅರ್ಧಶತಕ (25 ಬಾಲ್‌ಗೆ 52 ರನ್‌, 4 ಫೋರ್‌, 4 ಸಿಕ್ಸರ್‌) ಮತ್ತು ಶಿವಂ ದುಬೆ 40 ಬಾಲ್‌ಗೆ 40 ರನ್‌ ಆಟದ ಮೂಲಕ ಗೆಲುವಿನ ಭರವಸೆ ಮೂಡಿಸಿದರು. ಕೊನೆಗೆ ಎಂ.ಎಸ್.ಧೋನಿ (17), ಅನ್ಶುಲ್ ಕಾಂಬೋಜ್ (2) ಜೋಡಿ ತಂಡಕ್ಕೆ ಗೆಲುವಿನ ಟಚ್‌ ನೀಡಿದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಒಟ್ಟಾರೆ ಈ ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿತು.

Share This Article