16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

By
4 Min Read

– ಹೆಡ್‌, ಅಭಿಷೇಕ್‌ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌
– ಲಕ್ನೋ ಸೂಪರ್‌ ಜೈಂಟ್ಸ್‌ಗೆ ಪ್ಲೇ ಆಫ್‌ ಹಾದಿ ಕಠಿಣ

ಹೈದರಾಬಾದ್‌: ಮತ್ತೊಮ್ಮೆ ಅಭಿಷೇಕ್‌ ಶರ್ಮಾ, ಟ್ರಾವಿಸ್‌ ಹೆಡ್‌ (Travis Head) ಅವರ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ (SRH) ತಂಡವು ಲಕ್ನೋ ವಿರುದ್ಧ 10 ವಿಕೆಟ್‌ಗಳ ಅದ್ಧೂರಿ ಜಯ ಸಾಧಿಸಿದೆ. ಈ ಮೂಲಕ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ. ಆದ್ರೆ ಹೀನಾಯ ಸೋಲಿನೊಂದಿಗೆ ಲಕ್ನೋ ಸೂಪರ್‌ ಜೈಂಟ್ಸ್‌ (LSG) ಪ್ಲೇ ಆಫ್‌ ಹಾದಿಯನ್ನು ಕಠಿಣವಾಗಿಸಿಕೊಂಡಿದೆ.

ಕೋಲ್ಕತ್ತಾ ನೈಟ್‌ರೈಡರ್ಸ್‌ (KKR), ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಈಗಾಗಲೇ ತಲಾ 16 ಅಂಕಗಳೊಂದಿಗೆ ಪ್ಲೇ ಆಫ್‌ ಸಮೀಪದಲ್ಲಿವೆ. ಇದೀಗ 12 ರಲ್ಲಿ 7ನೇ ಗೆಲುವಿನೊಂದಿಗೆ 14 ಅಂಕ ಗಳಿಸಿ ಸನ್‌ ರೈಸರ್ಸ್‌ ಸಹ ಪ್ಲೇ ಆಫ್‌ ಪ್ರವೇಶಿಸಲು ಹತ್ತಿರವಾಗಿದೆ. 11 ಪಂದ್ಯಗಳಲ್ಲಿ ತಲಾ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್‌ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದು, ಲಕ್ನೋ 6ನೇ ಸ್ಥಾನದಲ್ಲೇ ಉಳಿಯುವಂತಾಗಿದೆ. ಮುಂದಿನ 2 ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗೆಲುವು ಸಾಧಿಸಿದರೆ ಮಾತ್ರವೇ ಲಕ್ನೋಗೆ ಪ್ಲೇ ಆಫ್‌ ತಲುಪುವ ಹಾದಿ ಸಲೀಸಾಗಲಿದೆ. ಇದೇವೇಳೆ ಡೆಲ್ಲಿ, ಸಿಎಸ್‌ಕೆ ತಂಡಗಳೂ ಗೆಲುವು ಕಾಯ್ದುಕೊಂಡರೆ ಲಕ್ನೋ ತಂಡ ಪ್ಲೇ ಆಫ್‌ನಿಂದ ಹೊರಬೀಳಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತ್ತು. 166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹೈದರಾಬಾದ್‌ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 9.4 ಓವರ್‌ಗಳಲ್ಲೇ 167 ರನ್‌ ಸಿಡಿಸಿ ಗೆಲುವು ದಾಖಲಿಸಿತು. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್‌

ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ (Abhishek Sharma) ಹಾಗೂ ಟ್ರಾವಿಸ್‌ ಹೆಡ್‌ ಲಕ್ನೋ ತಂಡ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಇದರಿಂದಾಗಿ ಹೈದರಾಬಾದ್‌ ಪವರ್‌ ಪ್ಲೇ ನಲ್ಲೇ ಯಾವುದೇ ವಿಕೆಟ್‌ ನಷ್ಟವಿಲ್ಲದೇ 107 ರನ್‌ ಕಲೆಹಾಕಿತ್ತು. ಬಳಿಕವೂ ವಿಕೆಟ್‌ ಬಿಟ್ಟುಕೊಡದೇ ಬ್ಯಾಟಿಂಗ್‌ ಅಬ್ಬರ ನಿಲ್ಲಿಸದ ಬ್ಯಾಟರ್ಸ್‌ ಕೇವಲ 9.4 ಓವರ್‌ಗಳಲ್ಲೇ 167 ರನ್‌ ಚಚ್ಚಿ ಗೆಲುವಿನ ಮೆಟ್ಟಿಲೇರಿದರು.

ಸನ್‌ ರೈಸರ್ಸ್‌ ಪರ 296.66 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಟ್ರಾವಿಸ್‌ ಹೆಡ್‌ 30 ಎಸೆತಗಳಲ್ಲಿ ಸ್ಫೋಟಕ 89 ರನ್‌ (8 ಸಿಕ್ಸರ್‌, 8 ಬೌಂಡರಿ) ಚಚ್ಚಿದರೆ, 267.85 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮಾ 28 ಎಸೆತಗಳಲ್ಲಿ 75 ರನ್‌ (6 ಸಿಕ್ಸರ್), 8 ಬೌಂಡರಿ) ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಚೆನ್ನೈ ಕಂಪನಿಯಲ್ಲಿ 3 ಕೋಟಿ ರೂ. ಕೊಟ್ಟು ಪೆನ್‌ಡ್ರೈವ್‌ ಖರೀದಿಸಿದ್ದಾರೆ: ಜಿ.ಟಿ ದೇವೇಗೌಡ ಗಂಭೀರ ಆರೋಪ

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ನಿಧಾನಗತಿಯ ಬ್ಯಾಟಿಂಗ್‌ನೊಂದಿಗೆ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 11.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ ಕೇವಲ 66 ರನ್‌ ಗಳಿಸಿತ್ತು. ಬಳಿಕ ಮುರಿಯದ 5ನೇ ವಿಕೆಟ್‌ಗೆ ಜೊತೆಗೂಡಿದ ನಿಕೋಲಸ್‌ ಪೂರನ್‌ ಹಾಗೂ ಆಯುಷ್‌ ಬದೋನಿ ಜೋಡಿ 52 ಎಸೆತಗಳಲ್ಲೇ 99 ರನ್‌ಗಳ ಜೊತೆಯಾಟ ನೀಡಿತು.

ಇದರಿಂದ ಲಕ್ನೋ ತಂಡ 160 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಗಿತು. ಜೊನೆಯವರೆಗೂ ಹೋರಾಡಿದ ಆಯುಷ್‌ ಬದೋನಿ 30 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 55 ರನ್‌ ಚಚ್ಚಿದರೆ, ನಿಕೋಲಸ್‌ ಪೂರನ್‌ 26 ಎಸೆತಗಳಲ್ಲಿ 1 ಸಿಕ್ಸರ್‌, 6 ಬೌಂಡರಿಯೊಂದಿಗೆ 48 ರನ್‌ ಬಾರಿಸಿದರು. ಇದರೊಂದಿಗೆ ಕೆ.ಎಲ್‌ ರಾಹುಲ್‌ 29, ಕೃನಾಲ್‌ ಪಾಂಡ್ಯ 24, ಕ್ವಿಂಟನ್‌ ಡಿಕಾಕ್‌ 2 ರನ್‌, ಸ್ಟೋಯ್ನಿಸ್‌ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ 2 ವಿಕೆಟ್‌ ಕಿತ್ತರೆ, ಪ್ಯಾಟ್‌ ಕಮ್ಮಿನ್ಸ್‌ 1 ವಿಕೆಟ್‌ ಪಡೆದರು.

Share This Article