ಜಡೇಜಾ ಜಾದು, ರುತುರಾಜ್‌ ಆಕರ್ಷಕ ಫಿಫ್ಟಿ; ಕೋಲ್ಕತ್ತಾ ವಿರುದ್ಧ ಚೆನ್ನೈಗೆ 7 ವಿಕೆಟ್‌ಗಳ ಜಯ

Public TV
1 Min Read

ಚೆನ್ನೈ: ಸತತ ಎರಡು ಸೋಲಿನಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಇಂದು (ಸೋಮವಾರ) ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಚೆನ್ನೈ ತಂಡವು ಉತ್ತಮ ಪ್ರದರ್ಶನ ನೀಡಿತು. ಸಿಎಸ್‌ಕೆ ತಂಡ ಕೆಕೆಆರ್‌ ಅನ್ನು 137 ರನ್‌ಗಳಿಗೆ ಕಟ್ಟಿ ಹಾಕಿತ್ತು. ಕೆಕೆಆರ್‌ ನೀಡಿದ 138 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ 17.4 ಓವರ್‌ಗೆ 3 ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿ ಸುಲಭ ಜಯ ದಾಖಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಲು ತಿಣುಕಾಡಿತು. ಜಡೇಜಾ, ತುಷಾರ್ ದೇಶಪಾಂಡೆ ಮಾರಕ ಬೌಲಿಂಗ್‌ ದಾಳಿಗೆ ಕೆಕೆಆರ್‌ ಬ್ಯಾಟರ್‌ಗಳು ಮಂಕಾದರು. ಕೋಲ್ಕತ್ತಾ ತಂಡದ ಸುನೀಲ್‌ ನರೈನ್‌ 27, ರಘುವಂಶಿ 24, ನಾಯಕ ಶ್ರೇಯಸ್‌ ಅಯ್ಯರ್‌ 34 ರನ್‌ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್‌ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ಸುನಿಲ್‌ ನಾರಾಯಣ, ಆ್ಯಂಡ್ರೆ ರಸೆಲ್‌, ವೆಂಕಟೇಶ್‌ ಅಯ್ಯರ್‌, ಅಂಗಕ್ರಿಷ್‌ ರಘುವಂಶಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. ಚೆನ್ನೈ ಪರ ಜಡೇಜಾ, ದೇಶ್‌ಪಾಂಡೆ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ರೆಹಮಾನ್‌ 2, ಮಹೇಶ್‌ ತೀಕ್ಷಣ್‌ಗೆ 1 ವಿಕೆಟ್‌ ಕಬಳಿಸಿದರು.

ಕೆಕೆಆರ್‌ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಚೆನ್ನೈ 17.4 ಓವರ್‌ಗಳಲ್ಲೇ 141 ರನ್‌ ಗಳಿಸಿ ಗೆದ್ದು ಬೀಗಿತು. ತಂಡದ ಪರ ನಾಯಕ ರುತುರಾಜ್‌ ಗಾಯಕ್ವಾಡ್‌ ಜವಾಬ್ದಾರಿಯುತ ಅರ್ಧಶತಕ (67 ರನ್‌, 9 ಫೋರ್‌) ಗಳಿಸಿ ಆಡಿದರು. ರಚಿನ್‌ ರವೀಂದ್ರ 15, ಡೇರಿಲ್ ಮಿಚೆಲ್ 25, ಶಿವಮ್‌ ದುಬೆ 28 ರನ್‌ ಗಳಿಸಿದರು. ಕೊನೆ ಹಂತದಲ್ಲಿ ಬಂದ ಧೋನಿ ಕಂಡು ಅಭಿಮಾನಿಗಳಲ್ಲಿ ಹುರುಪು ಹೆಚ್ಚಿಸಿದರು. ಕೂಲ್‌ ಕ್ಯಾಪ್ಟನ್‌ನಂತೆ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

Share This Article