ಫಲಿಸದ ಪಂತ್‌ ಮ್ಯಾಜಿಕ್‌; ಕರ್ರನ್‌ ಅಮೋಘ ಅರ್ಧಶತಕ – ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಜಯ

Public TV
3 Min Read

– ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಿಂಗ್‌ ಬಲ

ಚಂಡೀಗಢ: ಸ್ಯಾಮ್‌ ಕರ್ರನ್‌ (Sam Curran) ಅಮೋಘ ಅರ್ಧಶತಕದ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಪಂಜಾಬ್‌ ಕಿಂಗ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿದೆ.

ಪಂಜಾಬ್‌ ಗೆಲುವಿಗೆ ಕೊನೇ ಓವರ್‌ನಲ್ಲಿ 6 ರನ್‌ಗಳ ಅಗತ್ಯವಿತ್ತು. ಆದ್ರೆ ಬೌಲಿಂಗ್‌ನಲ್ಲಿದ್ದ ಸುಮಿತ್ ಕುಮಾರ್ ಆರಂಭದಲ್ಲೇ 2 ವೈಡ್‌ ಎಸೆದರು. ಮೊದಲ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲವಾದರೂ ಕ್ರೀಸ್‌ನಲ್ಲಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ (Liam Livingstone) 2ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿ ಗೆಲುವು ತಂದುಕೊಟ್ಟರು.

ಪಂಜಾಬ್‌ನ ಮುಲ್ಲನ್ಪುರ್‌ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಪಂಜಾಬ್‌ ಕಿಂಗ್ಸ್‌ ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಟ್ಟುಕೊಟ್ಟಿತು.

ಮೊದಲು ಬ್ಯಾಟಿಂಗ್‌ ಮಾಡಿದ ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತ್ತು. 175 ರನ್‌ ಗಳ ಗುರಿ ಬೆನ್ನತ್ತಿದ್ದ ಪಂಜಾಬ್‌ ಕಿಂಗ್ಸ್‌ (Punjab Kings) 19.2 ಓವರ್‌ಗಳಲ್ಲೇ 6 ವಿಕೆಟ್‌ಗೆ 177 ರನ್‌ ಗಳಿಸಿ ಗೆಲುವು ಸಾಧಿಸಿತು.

ಚೇಸಿಂಗ್‌ ಆರಂಭಿಸಿದ ಕಿಂಗ್ಸ್‌ ಪಂಜಾಬ್‌ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪವರ್‌ಪ್ಲೇನಲ್ಲೇ ಎರಡು ಪ್ರಮುಖ ವಿಕೆಟ್‌ ಕಳೆದುಕೊಂಡಿತು. ಆದ್ರೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಸ್ಯಾಮ್‌ ಕರ್ರನ್‌ 63 ರನ್‌ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಕರ್ರನ್‌ ಜೊತೆಗೂಡಿದ ಲಿವಿಂಗ್‌ಸ್ಟೋನ್‌ ಸಹ ಇದಕ್ಕೆ ಸಾಥ್‌ ನೀಡಿದರು.

ಕಿಂಗ್ಸ್‌ ಪಂಜಾಬ್‌ ಪರ ಸ್ಯಾಮ್‌ ಕರ್ರನ್‌ 63 ರನ್‌ (47 ಎಸೆತ, 6 ಬೌಂಡರಿ, 1 ಸಿಕ್ಸರ್‌), ಲಿವಿಂಗ್‌ಸ್ಟೋನ್‌ 38 ರನ್‌, ಶಿಖರ್‌ ಧವನ್‌ 22 ರನ್‌, ಜಾನಿ ಬೈರ್‌ಸ್ಟೋವ್‌ 9 ರನ್‌, ಪ್ರಭ್‌ಸಿಮ್ರನ್‌ ಸಿಂಗ್‌ 26 ರನ್‌, ಜಿತೇಶ್‌ ಶರ್ಮಾ 9 ರನ್‌, ಹರ್ಪ್ರೀರ್‌ ಬ್ರಾರ್‌ 2 ರನ್‌ ಗಳಿಸಿದರು.

ಡೆಲ್ಲಿ ಪರ ಖಲೀಲ್‌ ಅಹ್ಮದ್‌, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮಾ ಒಂದು ವಿಕೆಟ್‌ ಕಿತ್ತರು.

ಕೊನೇ ಓವರ್‌ನಲ್ಲಿ 25 ರನ್‌ ಚಚ್ಚಿದ ಅಭಿಷೇಕ್‌:
ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಸ್ಫೋಟಕ ಆರಂಭದ ಹೊರತಾಗಿಯೂ ಅಗ್ರಕ ಕ್ರಮಾಂಕದ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. 19 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಡೆಲ್ಲಿ ತಂಡ 160 ರನ್‌ ತಲುಪುವುದೂ ಕಷ್ಟವಾಗಿತ್ತು. ಆದ್ರೆ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಣಕ್ಕಿಳಿದ ಪಶ್ಚಿಮ ಬಂಗಾಳದ ಅಭಿಷೇಕ್‌ ಪೋರೆಲ್‌ ಒಂದೇ ಓವರ್‌ನಲ್ಲಿ 25 ರನ್‌ ಚಚ್ಚಿದರು. ಇದರಿಂದ ತಂಡದ ಮೊತ್ತ 170 ರನ್‌ಗಳ ಗಡಿ ದಾಟಿತು.

ಪಂತ್‌ ಕಂಬ್ಯಾಕ್‌ – ಅಭಿಮಾನಿಗಳಿಂದ ವೆಲ್‌ಕಮ್‌:
ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಭ್‌ ಪಂತ್‌ 14 ತಿಂಗಳ ಬಳಿಕ ಮತ್ತೆ ಕ್ರೀಸ್‌ಗಿಳಿದು ಬ್ಯಾಟಿಂಗ್‌ ಮಾಡಿದರು. ರಿಷಭ್‌ ಕ್ರೀಸ್‌ಗೆ ಬರುತ್ತಿದ್ದಂತೆ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು.

ಡೆಲ್ಲಿ ಪರ ಡೇವಿಡ್‌ ವಾರ್ನರ್‌ 29 ರನ್‌, ಮಿಚೆಲ್‌ ಮಾರ್ಷ್‌ 20 ರನ್‌, ಶಾಯಿ ಹೋಪ್‌ 33 ರನ್‌, ರಿಷಭ್‌ ಪಂತ್‌ 18 ರನ್‌, ರಿಕಿ ಭುಯಿ 3 ರನ್‌, ಟ್ರಿಸ್ಟಾನ್ ಸ್ಟಬ್ಸ್ 5 ರನ್‌, ಅಕ್ಷರ್‌ ಪಟೇಲ್‌ 21 ರನ್‌, ಸುಮಿತ್‌ ಕುಮಾರ್‌ 2 ರನ್‌, ಕುಲ್ದೀಪ್‌ 1 ರನ್‌ ಗಳಿಸಿದ್ರೆ, ಅಭಿಷೇಕ್‌ 10 ಎಸೆತಗಳಲ್ಲಿ 32 ರನ್‌ ಬಾರಿಸಿ ಕ್ರೀಸ್‌ನಲ್ಲಿ ಉಳಿದರು.

ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ತಲಾ 2 ವಿಕೆಟ್‌ ಕಿತ್ತರೆ, ಕಗಿಸೋ ರಬಾಡ, ಹರ್ಪ್ರೀತ್‌ ಬ್ರಾರ್‌, ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article