IPL 2024: ಕೊನೆಗೂ ಗೆಲುವಿನ ಖಾತೆ ತೆರೆದ ಮುಂಬೈ – ಜಿದ್ದಾಜಿದ್ದಿ ಕಣದಲ್ಲಿ ಹೋರಾಡಿ ಸೋತ ಡೆಲ್ಲಿ

Public TV
2 Min Read

– ಪಾಂಡ್ಯ ಫುಲ್‌ ಖುಷ್‌, ಟ್ರಿಸ್ಟಾನ್‌ ಸ್ಟಬ್ಸ್‌ ಸ್ಫೋಟಕ ಅರ್ಧಶತಕ ವ್ಯರ್ಥ

ಮುಂಬೈ: ಕೊನೇ ಓವರ್‌ವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್‌ (Mumbai Indians) ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಗೆಲುವಿನ ಖಾತೆ ತೆರೆದಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 234 ರನ್‌ ಗಳಿಸಿತ್ತು. 235 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಚೇಸಿಂಗ್‌ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 3.4 ಓವರ್‌ಗಳಲ್ಲೇ ಡೇವಿಡ್‌ ವಾರ್ನರ್‌ (10 ರನ್‌) ಅವರ ವಿಕೆಟ್‌ ಕಳೆದುಕೊಂಡಿತು. ಈ ವೇಳೆ ತಂಡದ ಮೊತ್ತ 22 ಆಗಿತ್ತು. ಬಳಿಕ ಜೊತೆಗೂಡಿದ ಅಭಿಷೇಕ್‌ ಪೋರೆಲ್‌ ಹಾಗೂ ಪೃಥ್ವಿ ಶಾ ಜೋಡಿ ತಂಡಕ್ಕೆ ಚೇತರಿಕೆ ನೀಡಿತ್ತು. ಅಲ್ಲದೇ ಟ್ರಿಸ್ಟಾನ್ಸ್‌ ಸಬ್ಟ್‌ ಅವರ ಸ್ಫೋಟಕ ಪ್ರದರ್ಶನ ತಂಡದಲ್ಲಿ ಗೆಲುವಿನ ಕನಸು ಚಿಗುರಿಸಿತ್ತು. ಆದ್ರೆ ಇತರೆ ಬ್ಯಾಟರ್‌ಗಳ ಸಾಥ್‌ ನೀಡದೇ ತಂಡ ಸೋಲನುಭವಿಸಿತು.

ಡೆಲ್ಲಿ ಪರ ಕೊನೇವರೆಗೂ ಹೋರಾಡಿದ ಸ್ಟಬ್ಸ್‌ 71 ರನ್‌ (25 ಎಸೆತ, 7 ಸಿಕ್ಸರ್‌, 3 ಬೌಂಡರಿ), ಪೃಥ್ವಿ ಶಾ 40 ಎಸೆತಗಳಲ್ಲಿ 66 ರನ್‌ (3 ಸಿಕ್ಸರ್‌, 8 ಬೌಂಡರಿ), ಅಭಿಷೇಕ್‌ 31 ಎಸೆತಗಳಲ್ಲಿ 41 ರನ್‌, ಡೇವಿಡ್‌ ವಾರ್ನರ್‌ 10 ರನ್‌, ರಿಷಭ್‌ ಪಂತ್‌ 1 ರನ್‌, ಅಕ್ಷರ್‌ ಪಟೇಲ್‌ 8 ರನ್‌, ಲಲಿತ್‌ ಯಾದವ್‌ 3 ರನ್‌, ಜೇ ರಿಚ್ಚರ್ಡ್‌ಸನ್‌ 2 ರನ್‌ ಗಳಿಸಿದರು. ಮುಂಬೈ ಪರ ಜೆರಾಲ್ಡ್ ಕೋಟ್ಜಿ 4 ವಿಕೆಟ್‌ ಕಿತ್ತರೆ, ಜಸ್ಪ್ರೀತ್‌ ಬುಮ್ರಾ 2 ವಿಕೆಟ್‌ ಹಾಗೂ ಶೆಫರ್ಡ್‌ 1 ವಿಕೆಟ್‌ ಪಡೆದು ಮಿಂಚಿದರು.

ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಮುಂಬೈ ಇಂಡಿಯನ್ಸ್‌ ಪರ ಬ್ಯಾಟರ್‌ಗಳು ಸಂಘಟಿತ ಪ್ರದರ್ಶನ ನೀಡಿದರು. ಯಾರೊಬ್ಬರೂ ಅರ್ಧಶತಕ ಗಳಿಸದಿದ್ದರೂ 200 ರನ್‌ಗಳ ಗಡಿ ದಾಟುವಲ್ಲಿ ಮುಂಬೈ ಯಶಸ್ವಿಯಾಯಿತು.

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶನ್‌ ಜೋಡಿ ಮೊದಲ 7 ಓವರ್‌ಗಳಲ್ಲಿ 80 ರನ್‌ ಬಾರಿಸಿತ್ತು. ನಂತರ ಕ್ರೀಸ್‌ಗಿಳಿದವರಲ್ಲಿ ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಹೊರತುಪಡಿಸಿದ್ರೆ ಉಳಿದ ಆಟಗಾರರು ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದರು.

ಮುಂಬೈ ಪರ ರೋಹಿತ್‌ ಶರ್ಮಾ 49 ರನ್‌ (27 ಎಸೆತ, 3 ಸಿಕ್ಸರ್‌, 6 ಬೌಂಡರಿ), ಇಶಾನ್‌ ಕಿಶನ್‌ 42 ರನ್‌ (23 ಎಸೆತ, 4 ಬೌಂಡರಿ, 2 ಸಿಕ್ಸರ್‌), ಟಿಮ್‌ ಡೇವಿಡ್‌ 45 ರನ್‌ (21 ಎಸೆತ, 4 ಸಿಕ್ಸರ್‌, 2 ಬೌಂಡರಿ), ರೊಮಾರಿಯೋ ಶೆಫರ್ಡ್ ಸ್ಫೋಟಕ 39 ರನ್‌ (10 ಎಸೆತ, 4 ಸಿಕ್ಸರ್‌, 3 ಬೌಂಡರಿ), ಹಾರ್ದಿಕ್‌ ಪಾಂಡ್ಯ 39 ರನ್‌ ಚಚ್ಚಿದರೆ, ತಿಲಕ್‌ ವರ್ಮಾ 6 ರನ್‌, ಸೂರ್ಯಕುಮಾರ್‌ ಯಾದವ್‌ ಶೂನ್ಯ ಸುತ್ತಿದರು. ಹೆಚ್ಚುವರಿ 14 ರನ್‌ ತಂಡಕ್ಕೆ ಸೇರ್ಪಡೆಯಾಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಕ್ಷರ್‌ ಪಟೇಲ್‌ ಮತ್ತು ಅನ್ರಿಚ್ ನಾರ್ಟ್ಜೆ ತಲಾ ಎರಡು ವಿಕೆಟ್‌ ಕಿತ್ತರು, ಖಲೀಲ್‌ ಅಹ್ಮದ್‌ ಒಂದು ವಿಕೆಟ್‌ ಪಡೆದರು.

Share This Article