ಲಕ್ನೋ ವಿರುದ್ಧ ಡೆಲ್ಲಿಗೆ 19 ರನ್‌ಗಳ ಜಯ – ರಾಹುಲ್‌ ಪಡೆಗೆ ಪ್ಲೇ-ಆಫ್‌ ಹಾದಿ ಕಠಿಣ

Public TV
2 Min Read

– ಪೊರೆಲ್‌ ಹಾಗೂ ಟ್ರಿಸ್ಟನ್ ಫಿಫ್ಟಿಗೆ ಒಲಿದ ಜಯ
– 3 ವಿಕೆಟ್‌ ಕಿತ್ತು ಮಿಂಚಿದ ಇಶಾಂತ್‌ ಶರ್ಮಾ
– ನಿಕೋಲಸ್ ಪೂರನ್ ಮತ್ತು ಅರ್ಷದ್‌ ಖಾನ್‌ ಫಿಫ್ಟಿ ಆಟ ವ್ಯರ್ಥ

ನವದೆಹಲಿ: ಅಭಿಷೇಕ್‌ ಪೊರೆಲ್‌ ಹಾಗೂ ಟ್ರಿಸ್ಟನ್‌ ಸ್ಟಬ್ಸ್‌ ಆಕರ್ಷಕ ಫಿಫ್ಟಿ ಹಾಗೂ ಇಶಾಂತ್‌ ಶರ್ಮಾ ಅಬ್ಬರದ ಬೌಲಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ 19 ರನ್‌ಗಳ ಜಯ ಸಾಧಿಸಿತು. ಪ್ಲೇ-ಆಫ್‌ ಕನಸು ಕಂಡಿದ್ದ ರಾಹುಲ್‌ ಪಡೆಗೆ ಸೋಲಿನ ಹಾದಿ ಮತ್ತಷ್ಟು ಕಠಿಣವಾಗಿದೆ.

ಇಲ್ಲಿ ನಡೆದ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿತು. 209 ರನ್‌ ಗುರಿ ಬೆನ್ನತ್ತಿದ ಲಕ್ನೋ 20 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಸ್ಫೋಟಕ ಬ್ಯಾಟರ್‌ ಜೇಕ್‌ ಫ್ರೇಸರ್‌ ಮೆಕ್‌ಗುರ್ಕ್‌ ಡಕೌಟ್‌ ಆಗಿ ಪೆವಿಲಿಯನ್‌ ಸೇರಿದರು. ಆದರೂ ವಿಚಲಿತರಾಗದ ಡೆಲ್ಲಿ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

ಮತ್ತೊಬ್ಬ ಓಪನರ್‌ ಅಭಿಷೇಕ್‌ ಪೊರೆಲ್‌ ಅರ್ಧಶತಕ (58 ರನ್‌, 33 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿ ಮಿಂಚಿದರು. ಶಾಯ್‌ ಹೋಪ್‌ 38 ಹಾಗೂ ನಾಯಕ ರಿಷಭ್‌ ಪಂತ್‌ 33 ರನ್‌ ಗಳಿಸಿ ಸವಾಲಿನ ಮೊತ್ತ ಪೇರಿಸಲು ಸಹಕಾರಿಯಾದರು. ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಟ್ರಿಸ್ಟನ್‌ ಸ್ಟಬ್ಸ್‌ 57 ರನ್‌ ಬಾರಿಸಿ (25 ಬಾಲ್‌, 3 ಫೋರ್‌, 4 ಸಿಕ್ಸರ್‌) ಉತ್ತಮ ಮೊತ್ತಕ್ಕೆ ನೆರವಾದರು.

ಲಕ್ನೋ ಪರ ನವೀನ್-ಉಲ್-ಹಕ್ 2 ವಿಕೆಟ್‌ ಕಿತ್ತರು. ಅರ್ಷದ್ ಖಾನ್ ಹಾಗೂ ರವಿ ಬಿಷ್ಣೋಯ್ ತಲಾ ಒಂದು ವಿಕೆಟ್‌ ಪಡೆದರು.

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 209 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಲಕ್ನೋ ಬ್ಯಾಟಿಂಗ್‌ ವೈಫಲ್ಯ ಎದುರಿಸಿತು. ತಂಡದ ಮೊತ್ತ ಕೇವಲ 7 ರನ್‌ ಇದ್ದಾಗಲೇ ಲಕ್ನೋ ತಂಡದ ನಾಯಕ ಕೆ.ಎಲ್‌.ರಾಹುಲ್‌ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. ಮೊದಲ ಪವರ್‌ ಪ್ಲೇ ಮುಕ್ತಾಯಕ್ಕೆ 59 ರನ್‌ ಗಳಿಸಿದ್ದ ಲಕ್ನೋ ಪ್ರಮುಖ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ನಿಕೋಲಸ್ ಪೂರನ್ ಮತ್ತು ಅರ್ಷದ್‌ ಖಾನ್‌ ಫಿಫ್ಟಿ ಆಟ ವ್ಯರ್ಥವಾಯಿತು. ಪೂರನ್‌ 27 ಬಾಲ್‌ಗೆ 61 ರನ್‌ (6 ಫೋರ್‌, 4 ಸಿಕ್ಸರ್‌) ಹಾಗೂ ಖಾನ್‌ ಔಟಾಗದೇ 58 ರನ್‌ (33 ಬಾಲ್‌, 3 ಫೋರ್‌, 5 ಸಿಕ್ಸರ್‌) ಸಿಡಿಸಿ ಮಿಂಚಿದರೂ ಪ್ರಯೋಜನವಾಗಲಿಲ್ಲ. ಉಳಿದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಕಾರಣ ತಂಡದ ಸೋಲನುಭವಿಸಿತು.

ಕೃನಾಲ್ ಪಾಂಡ್ಯ 18, ಯುದ್ಧವೀರ್ ಸಿಂಗ್ 14 ಗಳಿಸಿದರು. ಡೆಲ್ಲಿ ಪರ 3 ವಿಕೆಟ್‌ ಕಬಳಿಸಿ ಇಶಾಂತ್ ಶರ್ಮಾ ಮಿಂಚಿದರು. ಖಲೀಲ್ ಅಹಮದ್, ಅಕ್ಷರ್ ಪಟೇಲ್, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್ ತಲಾ 1 ವಿಕೆಟ್‌ ಕಿತ್ತರು.

Share This Article