ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ

Public TV
2 Min Read

ಚೆನ್ನೈ: ತವರಿನಲ್ಲಿ ಚೆನ್ನೈ ಸಿಡಿಸಿದ ರನ್‌ ಮಳೆಗೆ ಗುಜರಾತ್‌ ಟೈಟಾನ್ಸ್‌ (Gujarat Titans) ಕೊಚ್ಚಿ ಹೋಗಿದೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) 63 ರನ್‌ಗಳ ಭರ್ಜರಿ ಜಯದೊಂದಿಗೆ ಐಪಿಎಲ್‌ (IPL) ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 6 ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಗುಜರಾತ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ತಂಡದ ಮೊತ್ತ 28 ರನ್‌ಗಳಿಸಿದಾಗ ಶುಭಮನ್‌ ಗಿಲ್‌ (Shubaman Gill) 8 ರನ್‌ ಗಳಿಸಿ ಎಲ್‌ಬಿಗೆ ಔಟಾದರು. 55 ರನ್‌ಗಳಿಸುವಷ್ಟರಲ್ಲಿ ಗುಜರಾತ್‌ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. 12 ರನ್‌ಗಳಿಸಿದ್ದ ವಿಜಯ್‌ ಶಂಕರ್‌ ಅವರ ಕ್ಯಾಚನ್ನು ಧೋನಿ (Dhoni) ಹಾರಿ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. 21 ರನ್‌ ಗಳಿಸಿ ಸಿಕ್ಸ್‌ ಸಿಡಿಸಲು ಹೋಗಿ ರಹಾನೆ ಹಿಡಿದ ಉತ್ತಮ ಕ್ಯಾಚ್‌ಗೆ ಡೇವಿಡ್‌ ಮಿಲ್ಲರ್‌ ಔಟಾದರು.

ಸಾಯಿ ಸುದರ್ಶನ್‌ 37 ರನ್‌ (31 ಎಸೆತ, 3 ಬೌಂಡರಿ), ಡೇವಿಡ್‌ ಮಿಲ್ಲರ್‌ 21 ರನ್‌ ಗಳಿಸಿ ಔಟಾದರು. ಟೈಟಾನ್ಸ್‌ ಪರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಟಗಾರರು ಆಡದ ಕಾರಣ ಸೋಲೊಪ್ಪಿಕೊಂಡಿತು. ದೀಪಕ್‌ ಚಹರ್‌ 4 ಓವರ್‌ ಎಸೆದು 28 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ತುಷಾರ್‌ ದೇಶಾಪಂಡೆ 4 ಓವರ್‌ ಎಸೆದು 21 ರನ್‌ ನೀಡಿ 2 ವಿಕೆಟ್‌ ಕಿತ್ತರು. ಮುಸ್ತಫಿಜುರ್ ರೆಹಮಾನ್ 30 ರನ್‌ ನೀಡಿ 2 ವಿಕೆಟ್‌ ಪಡೆದರು.

ಸ್ಪೋಟಕ ಆರಂಭ: ಚೆನ್ನೈ ಆರಂಭಿಕ ಆಟಗಾರರಾದ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಮತ್ತು ರಚಿನ್‌ ರವೀಂದ್ರ (Rachin Ravindra) ಸ್ಫೋಟಕ ಆರಂಭ ನೀಡಿದರು. ಇಬ್ಬರು ಮೊದಲ ವಿಕೆಟಿಗೆ 32 ಎಸೆತಗಳಲ್ಲಿ 62 ರನ್‌ ಜೊತೆಯಾಟ ನೀಡಿದರು. ರಚಿನ್‌ ರವೀಂದ್ರ 46 ರನ್‌ (20 ಎಸೆತ, 6 ಬೌಂಡರಿ, 3 ಸಿಕ್ಸರ್‌) ಹೊಡೆದು ಔಟಾದರೆ ಗಾಯಕ್ವಾಡ್‌ 46 ರನ್‌ (36 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇದನ್ನೂ ಓದಿ: ಆರ್‌ಸಿಬಿ ಪಂದ್ಯ ಗೆದ್ದ ಖುಷಿಯಲ್ಲಿ ಫ್ಯಾಮಿಲಿಗೆ ವೀಡಿಯೋ ಕರೆ ಮಾಡಿ ಕೊಹ್ಲಿ ಮಾತು

ಅಜಿಂಕ್ಯಾ ರಹಾನೆ 12 ರನ್‌ ಗಳಿಸಿ ಔಟಾದರು. ನಂತರ ಬಂದ ಶಿವಂ ದುಬೆ (Shivam Dube) ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. 23 ಎಸೆತಗಳಲ್ಲಿ 5 ಸಿಕ್ಸ್‌, 2 ಬೌಂಡರಿಯೊಂದಿಗೆ 51 ರನ್‌ ಚಚ್ಚಿ ಔಟಾದರು.

ಕೊನೆಯಲ್ಲಿ ಡೆರೆಲ್‌ ಮಿಚೆಲ್‌ ಔಟಾಗದೇ 24 ರನ್‌ ಮತ್ತು ಸಮೀರ್‌ ರಿಜ್ವಿ 14 ರನ್‌ ಹೊಡೆದರು. 6 ಮಂದಿ ಬೌಲರ್‌ಗಳು ಬೌಲ್‌ ಮಾಡಿದರೂ ಚೆನ್ನೈ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

Share This Article