ಕೋಟಿ ಕೋಟಿ ಸುರಿದು ಖರೀದಿಸಿದ ಆಟಗಾರರು ಬ್ಯಾಟಿಂಗ್‌ನಲ್ಲಿ ಫ್ಲಾಪ್‌ – ಮಾಲೀಕರಿಗೆ ನಿರಾಸೆ

Public TV
2 Min Read

ಲಕ್ನೋ: ಇಲ್ಲಿನ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ (Lacknow Super Gaints) ಹಾಗೂ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ನಡುವೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ 5 ವಿಕೆಟ್‌ಗಳ ಜಯ ಸಾಧಿಸಿತು.

121 ಅತ್ಯಲ್ಪ ರನ್‌ ಗಳಿಸಿದ್ದ ಹೈದರಾಬಾದ್‌ ತಂಡ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ ಹಾಗೂ ಬೌಲರ್‌ಗಳ ಕಳಪೆ ಪ್ರದರ್ಶನದಿಂದ 2ನೇ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

ಲಕ್ನೋ ಸೂಪರ್‌ ಜೈಂಟ್ಸ್ ತಂಡ ಚೇಸಿಂಗ್‌ ಆರಂಭಿಸುತ್ತಿದ್ದಂತೆ ಬೌಲಿಂಗ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ್ದ ಹೈದರಾಬಾದ್‌ ಪವರ್‌ ಪ್ಲೇ ನಂತರ ರನ್‌ ಬಿಟ್ಟುಕೊಟ್ಟಿತು. ಕಳೆದ ಎರಡೂ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದ ಆರಂಭಿಕ ಕೇಲ್‌ ಮೇಯರ್ಸ್‌ 13 ರನ್‌ಗಳಿಗೆ ಔಟಾಗುತ್ತಿದ್ದಂತೆ ಹೈದರಾಬಾದ್‌ ತಂಡದ ಮಾಲೀಕರಾದ ಕಾವ್ಯ ಮಾರನ್‌ (Kavya Maran) ಹುಚ್ಚೆದ್ದು ಕುಣಿದಿದ್ದರು. ಕೊನೆಯಲ್ಲಿ ತಂಡದ ಸೋಲಿನಿಂದ ನಿರಾಸೆ ಅನುಭವಿಸಿದರು. ಈ ಕುರಿತ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಕೈಕೋಟ್ಟ ದುಬಾರಿ ಆಟಗಾರರು: ಇನ್ನೂ ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿ ಹಣ ಸುರಿದು ಬಿಕರಿ ಮಾಡಿದ ಹೈದರಾಬಾದ್‌ ತಂಡದ ಆಟಗಾರರು ಕಳೆದ 2 ಪಂದ್ಯಗಳಲ್ಲೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಇದನ್ನೂ ಓದಿ: ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

ಇಂಗ್ಲೆಂಡ್‌ ತಂಡದಲ್ಲಿ ಟೆಸ್ಟ್‌, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದ ಹ್ಯಾರಿ ಬ್ರೂಕ್‌ (Harry Brook) ಅವರನ್ನ ಹೈದರಾಬಾದ್‌ ತಂಡ 13.25 ಕೋಟಿ ರೂ.ಗೆ ಖರೀದಿಸಿತ್ತು. ಅದೇ ರೀತಿ ರಣಜಿಯಲ್ಲಿ ಏಕಾಂಗಿ ಹೋರಾಟ ನಡೆಸಿ ಕರ್ನಾಟಕ ತಂಡವನ್ನ ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ (Mayank Agarwal) ಅವರನ್ನ 8.25 ಕೋಟಿ ರೂ. ನೀಡಿ ಖರೀದಿಸಿದೆ. ಟೀಂ ಇಂಡಿಯಾ ಆಟಗಾರರಾದ ರಾಹುಲ್‌ ತ್ರಿಪಾಠಿ (Rahul Tripathi) ಹಾಗೂ ವಾಷಿಂಗ್ಟನ್‌ ಸುಂದರ್‌ ಅವರನ್ನ ಕ್ರಮವಾಗಿ 8.50 ಕೋಟಿ ರೂ., 8.75 ಕೋಟಿ ರೂ. ನೀಡಿ ಖರೀದಿಸಿದೆ. ತಂಡಕ್ಕೆ ದುಬಾರಿ ಬೆಲೆಗೆ ಬಿಕರಿಯಾದ ಆಟಗಾರರ ಕಳಪೆ ಪ್ರದರ್ಶನದಿಂದ ತಂಡ ಸೋಲನುಭವಿಸಿದ್ದು, ಮಾಲೀಕರೂ ನಿರಾಸೆ ಹೊಂದಿದ್ದಾರೆ.

ಕಳೆದ ಎರಡೂ ಪದ್ಯಗಳಲ್ಲೂ ಹೈದರಾಬಾದ್‌ ತಂಡ ಬೌಲಿಂಗ್‌ನಲ್ಲಿ ಸ್ವಲ್ಪ ಹಿಡಿತ ಸಾಧಿಸಿದರೂ, ಬ್ಯಾಟಿಂಗ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕುವಲ್ಲಿ ಎಡವಿದೆ. ಮೊದಲ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 131 ರನ್‌ ಗಳಿಸಿ 72 ರನ್‌ಗಳ ಅಂತರದಲ್ಲಿ ಸೋತರೆ, 2ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 121ರನ್‌ ಗಳಿಸಿ 5 ವಿಕೆಟ್‌ಗಳ ಹೀನಾಯ ಸೋಲುಕಂಡಿದೆ. ಮುಂದಿನ ಪಂದ್ಯಗಳಲ್ಲಿ ತಂಡ ಗೆಲುವಿನ ತಂತ್ರ ಹೇಗೆ ರೂಪಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.

Share This Article