ಸಿಕ್ಸರ್‌, ಬೌಂಡರಿಗಳಿಂದಲೇ 50 ರನ್‌ – ಇಬ್ಬರು ವಿಶೇಷ ವ್ಯಕ್ತಿಗಳಿಗೆ ಅರ್ಧಶತಕ ಅರ್ಪಿಸಿದ ಪೂರನ್‌

Public TV
2 Min Read

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಲಕ್ನೋ ಸೂಪರ್‌ ಜೈಂಟ್ಸ್‌ (LSG)1 ರನ್‌ಗಳ ರೋಚಕ ಗೆಲುವಿಗೆ ಕಾರಣರಾದ ನಿಕೂಲಸ್‌ ಪೂರನ್‌ (Nicholas Pooran) ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ಮತ್ತು ಮಗುವಿಗೆ ಅರ್ಪಿಸಿದ್ದಾರೆ.

ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂರನ್‌, ಸ್ಟೊಯ್ನಿಸ್‌ ಮತ್ತು ಕೆಎಲ್ ರಾಹುಲ್‌ (KL Rahul) ಉತ್ತಮ ಜೊತೆಯಾಟ ನೀಡಿದರು. ಕೊನೆಯ 4 ಓವರ್‌ಗಳಲ್ಲಿ 50 ರನ್‌ ಚೇಸ್‌ ಮಾಡಬಹುದಿತ್ತು. ಆದರೆ ನಾನು ಆರಂಭದಿಂದಲೂ ಹೊಡೆಯಲು ಯತ್ನಿಸಿದೆ. ಎರಡನೇ ಎಸೆತದಲ್ಲಿ ನಾನು ಸಿಕ್ಸ್‌ (Six) ಹೊಡೆದೆ. ಕೊನೆಯವರೆಗೆ ಇದ್ದು ತಂಡವನ್ನು ಗೆಲ್ಲಿಸಬೇಕು ಎಂದು ಪ್ರಯತ್ನಿಸಿದ್ದೆ. ಆದರೆ ಇದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಐಪಿಎಲ್‌ ದಾಖಲೆ:
ಬೆಂಗಳೂರು (Bengaluru) ವಿರುದ್ಧದ ಪಂದ್ಯದಲ್ಲಿ ಪೂರನ್‌ 15 ಎಸೆತಗಳಲ್ಲಿ 50 ರನ್‌ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಈ ವರ್ಷದ ಐಪಿಎಲ್‌ ಆವೃತ್ತಿಯಲ್ಲಿ ದಾಖಲಾದ ವೇಗದ ಅರ್ಧಶತಕ ಎಂಬ ಹೆಗ್ಗಳಿಕೆಗೆ ಪೂರನ್‌ ಪಾತ್ರರಾಗಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಎರಡನೇ ವೇಗದ ಅರ್ಧಶತಕ ಹೊಡೆದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಪೂರನ್‌ ಈಗ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ಕೆಎಲ್‌ ರಾಹುಲ್‌ ಮತ್ತು ಪ್ಯಾಟ್‌ ಕಮ್ಮಿನ್ಸ್‌ 14 ಎಸೆತಗಳಲ್ಲಿ 50 ರನ್‌ ಹೊಡೆದಿದ್ದರು. ಯೂಸೂಫ್‌ ಪಠಾಣ್‌, ಸುನಿಲ್‌ ನರೈನ್‌ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ಆರಂಭದಿಂದಲೇ ಸ್ಫೋಟಕ ಆಟ:
213 ರನ್‌ಗಳ ಗುರಿಯನ್ನು ಪಡೆದ ಲಕ್ನೋ 23 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿತ್ತು. 10.4 ಓವರ್‌ಗಳಲ್ಲಿ 99 ರನ್‌ ಆದಾಗ ಸ್ಟೊಯ್ನಿಸ್‌ ಔಟಾದಾಗ ಪಂದ್ಯ ಆರ್‌ಸಿಬಿ ಕಡೆ ವಾಲಿತ್ತು. ಬೆಂಗಳೂರು ಕಡೆ ವಾಲಿದ ಪಂದ್ಯವನ್ನು ಬ್ಯಾಟ್‌ ಮೂಲಕ ಲಕ್ನೋ ಕಡೆಗೆ ಪೂರನ್‌ ವಾಲಿಸಿದರು. ಎರಡನೇ ಎಸೆತದಲ್ಲಿ ಸಿಕ್ಸ್‌ ಹೊಡೆದು ಅಬ್ಬರಿಸಿದ್ದ ಪೂರನ್‌ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಅಂತಿಮವಾಗಿ 62 ರನ್‌ (19 ಎಸೆತ, 4 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು. ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ 115 ಮೀಟರ್‌ ಸಿಕ್ಸ್‌ – ಡುಪ್ಲೆಸಿಸ್‌ ಈಗ ಸಿಕ್ಸರ್‌ ವೀರ ಅಂದ್ರು ಫ್ಯಾನ್ಸ್‌

19 ಎಸೆತಗಳ ಪೈಕಿ 3 ಎಸೆತಗಳಲ್ಲಿ (0,6,0,0,4,6,6,1,6,1,4,6,4,1,6,4,1,6,W) ಮಾತ್ರ ಪೂರನ್‌ ರನ್‌ ಹೊಡೆದಿರಲಿಲ್ಲ. ಸಿಕ್ಸ್‌ ಮತ್ತು ಬೌಂಡರಿ ಮೂಲಕವೇ ಪೂರನ್‌ 58 ರನ್‌ ಚಚ್ಚಿದ್ದರು.

ಪೂರನ್‌ ಮತ್ತು ಆಯುಷ್ ಬದೋನಿ 6ನೇ ವಿಕೆಟಿಗೆ ಕೇವಲ 35 ಎಸೆತಗಳಲ್ಲಿ 84 ರನ್‌ ಬಾರಿಸಿದ್ದರು. ಈ ಪೈಕಿ ಪೂರನ್‌ 17 ಎಸೆತಗಳಲ್ಲಿ 56 ರನ್‌ ಹೊಡೆದಿದ್ದರು. ಪೂರನ್‌ ಕ್ರೀಸ್‌ಗೆ ಬರುವಾಗ ಲಕ್ನೋ ತಂಡದ ಗೆಲುವಿಗೆ 56 ಎಸೆತಗಳಲ್ಲಿ 114 ರನ್‌ ಬೇಕಿತ್ತು. ಪೂರನ್‌ ಔಟಾದಾಗ ಗೆಲುವಿಗೆ 18 ಎಸೆತಗಳಲ್ಲಿ 24 ರನ್‌ಗಳ ಅಗತ್ಯವಿತ್ತು.

ಮೊದಲ 6 ಓವರ್‌ ಪವರ್‌ ಪ್ಲೇನಲ್ಲಿ ಲಕ್ನೋ ತಂಡ 3 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿತ್ತು. ಆದರೆ 8ನೇ ಓವರ್‌ನಿಂದ 16ನೇ ಓವರ್‌ ಅಂದರೆ 9 ಓವರ್‌ಗಳಲ್ಲಿ ಬರೋಬ್ಬರಿ 125 ರನ್‌ ಚಚ್ಚಿದ ಪರಿಣಾಮ ಲಕ್ನೋ ತಂಡ 1 ರನ್‌ಗಳ ರೋಚಕ ಜಯ ಸಾಧಿಸಿದೆ.

Share This Article