IPL 2023: ಡೆಲ್ಲಿಗೆ 15 ರನ್‌ಗಳ ಜಯ – ಪಂಜಾಬ್‌ ಪ್ಲೇ ಆಫ್‌ ಕನಸು ಭಗ್ನ

By
2 Min Read

ಶಿಮ್ಲಾ: ರಿಲೀ ರೆಸ್ಸೋ, ಪೃಥ್ವಿ ಶಾ ಸ್ಫೋಟಕ ಅರ್ಧ ಶತಕ ಹಾಗೂ ಇಶಾಂತ್‌ ಶರ್ಮಾ ಮತ್ತು ನಾರ್ಟ್ಜೆ ಬಿಗಿ ಬೌಲಿಂಗ್‌ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಜಯ ಸಾಧಿಸಿತು. ಇದರಿಂದ ಪಂಜಾಬ್‌ನ ಪ್ಲೇ ಆಫ್‌ ಕನಸು ಭಗ್ನಗೊಂಡಿತು.

ಬುಧವಾರ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 213 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಆ ಬಳಿಕ ಧವನ್‌ ಪಡೆಯನ್ನು 8 ವಿಕೆಟ್‌ಗಳಿಗೆ 198 ರನ್‌ಗಳಿಗೆ ಕಟ್ಟಿಹಾಕಿ ಗೆಲುವು ದಾಖಲಿಸಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ವಾರ್ನರ್‌ ಪಡೆ ಉತ್ತಮ ಬ್ಯಾಟಿಂಗ್‌ ಮಾಡಿತು. ಆರಂಭಿಕರಾಗಿ ಫೀಲ್ಡಿಗಿಳಿದ ಡೇವಿಡ್‌ ವಾರ್ನರ್‌ ಮತ್ತು ಪೃಥ್ವಿ ಶಾ ಉತ್ತಮ ಶುಭಾರಂಭ ನೀಡಿದರು. ಮೊದಲ ವಿಕೆಟ್‌ಗೆ 94 ರನ್‌ ಜೊತೆಯಾಟವಾಡಿ ತಂಡಕ್ಕೆ ನೆರವಾದರು. 46 ರನ್‌ ಪೇರಿಸಿದ್ದ ವಾರ್ನರ್‌ ಚೆಂಡನ್ನು ಬೌಂಡರಿಗೆ ಅಟ್ಟಲು ಮುಂದಾಗಿ ಶಿಖರ್‌ ಧವನ್‌ಗೆ ಕ್ಯಾಚ್‌ ನೀಡಿ ಅರ್ಧ ಶತಕ ವಂಚಿತರಾಗಿ ನಿರ್ಗಮಿಸಿದರು.

ಡೆಲ್ಲಿ ಪರ ರಿಲೀ ರೆಸ್ಸೊ 82 (37 ಎಸೆತ, 6 ಬೌಂಡರಿ, 6 ಸಿಕ್ಸ್‌) ರನ್‌ ಸಿಡಿಸಿ ಔಟಾಗದೇ ಉಳಿದರು. ಇತ್ತ ಪೃಥ್ವಿ ಶಾ 54 (38 ಎಸೆತ, 7 ಬೌಂಡರಿ, 1 ಸಿಕ್ಸ್) ಫಿಲಿಪ್‌ ಸಾಲ್ಟ್‌ ಔಟಾಗದೇ 26 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ಪಂಜಾಬ್‌ ಕಿಂಗ್ಸ್‌ ಪರ ಸ್ಯಾಮ್‌ ಕರನ್‌ ಎರಡು ವಿಕೆಟ್‌ ಪಡೆದು ಮಿಂಚಿದರು.

214 ರನ್‌ ಗುರಿ ಬೆನ್ನತ್ತಿ ಫೀಲ್ಡಿಗಿಳಿದ ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 198 ರನ್‌ಗಳನ್ನಷ್ಟೇ ಗಳಿಸಿತು. ಶಿಖರ್‌ ಧವನ್‌, ಇಶಾಂತ್‌ ಶರ್ಮಾ ಓವರ್‌ನಲ್ಲಿ ಶೂನ್ಯ ಸುತ್ತಿ ಪೆವಿಲಿಯನ್‌ ಸೇರಿದರು. ಆರಂಭಿಕರಾಗಿ ಶಿಖರ್‌ ಧವನ್‌ 10ನೇ ಬಾರಿಗೆ ಡಕ್‌ ಆಗಿದ್ದಾರೆ.

ಈ ವೇಳೆ ಪ್ರಭಾಸಿಮ್ರಾನ್‌ ಮತ್ತು ಅಥರ್ವ ಟೈಡೆ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. 22 ರನ್‌ ಗಳಿಸಿ ಪ್ರಭಾಸಿಮ್ರಾನ್‌ ಸಿಂಗ್‌ ಕೂಡ ಔಟಾದರು. ಬ್ಯಾಕ್‌ ಟು ಬ್ಯಾಕ್‌ ಫೋರ್‌ ಬಾರಿಸಿದ ಟೈಡೆ 55 (42 ಎಸೆತ, 5 ಫೋರ್‌, 2 ಸಿಕ್ಸ್‌) ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಲಿಯಾಮ್‌ ಲಿವಿಂಗ್‌ಸ್ಟೋನ್‌ 94 (48 ಎಸೆತ, 5 ಬೌಂಡರಿ, 9 ಸಿಕ್ಸ್‌) ಸಿಡಿಸಿ ಘರ್ಜಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದರು. ಇಶಾಂತ್‌ ಶರ್ಮಾ 3 ಓವರ್‌ಗಳಿಗೆ 36 ರನ್‌ಗಳನ್ನು ನೀಡಿ 2 ವಿಕೆಟ್‌ ಪಡೆದರು. ಅನ್ರಿಚ್‌ ನಾರ್ಟ್ಜೆ 4 ಓವರ್‌ಗೆ 36 ರನ್‌ ನೀಡಿ 2 ವಿಕೆಟ್‌ ಕಿತ್ತರು.

ಪಾಯಿಂಟ್‌ ಪಟ್ಟಿಯ ತಳ್ಳದಲ್ಲಿರುವ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಿಸಿ ಪ್ಲೇ ಆಫ್‌ನ ಕ್ಷೀಣ ಅವಕಾಶವನ್ನು ಜೀವಂತವಾಗಿರಿಸಲು ಪಂಜಾಬ್‌ ತಂಡ ಕಾತರವಾಗಿತ್ತು. ಆದರೆ ಹೀನಾಯ ಸೋಲನುಭವಿಸಿದ ಪಂಜಾಬ್‌ನ ಪ್ಲೇ ಆಫ್‌ ಭಗ್ನಗೊಂಡಿತು.

Share This Article