ಜೈಸ್ವಾಲ್, ಚಾಹಲ್ ಆಟಕ್ಕೆ ಮಂಕಾದ ಪಂಜಾಬ್ – ಪ್ಲೇ ಆಫ್ ಸನಿಹಕ್ಕೆ ರಾಜಸ್ಥಾನ್ ರಾಯಲ್ಸ್

Public TV
3 Min Read

ಮುಂಬೈ: ಶನಿವಾರ ನಡೆದ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್ ಆರ್ಭಟ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಮೋಡಿಗೆ ರಾಜಸ್ಥಾನ್ ರಾಯಲ್ಸ್ ತಂಡವು ಆರು ವಿಕೆಟ್‍ಗಳ ಅಂತರದಿಂದ ಜಯಭೇರಿ ಸಾಧಿಸಿದೆ.

ಗೆಲುವಿನ ಹಾದಿಗೆ ಮರಳಿರುವ ರಾಜಸ್ಥಾನ್, ಪ್ಲೇ-ಆಫ್‍ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮಯಂಕ್ ಅಗರವಾಲ್ ಪಡೆಯ ಪ್ಲೇ-ಆಫ್ ಹಾದಿ ಇನ್ನಷ್ಟೂ ಕಠಿಣವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಂಜಾಬ್ ತಂಡವು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್‍ಗಳ ಗುರಿ ನೀಡಿತ್ತು.

ರಾಜಸ್ಥಾನ್ ಪರ ಚಾಹಲ್ ಸ್ಪಿನ್ ಮೋಡಿ ಮಾಡಿ ಮೂರು ವಿಕೆಟ್ ಕಬಳಿಸುವ ಮೂಲಕ ಪಂಜಾಬ್‍ನ ಬ್ಯಾಟಿಂಗ್ ಕ್ರಮಾಂಕವನ್ನು ಕಟ್ಟಿ ಹಾಕಿದರು. ನಂತರದಲ್ಲಿ ಮಯಂಕ್ ಪಡೆ ನೀಡಿದ್ದ 190 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್, ಜೈಸ್ವಾಲ್‍ನ ಅರ್ಧಶತಕದ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಉಳಿದಿರುವಂತೆಯೇ 19.4 ಓವರ್‍ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.

ಇದರೊಂದಿಗೆ ರಾಜಸ್ಥಾನ ಆಡಿರುವ 11 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಸಂಪಾದಿಸಿರುವ ರಾಜಸ್ಥಾನ್, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ಪಂಜಾಬ್ 11 ಪಂದ್ಯಗಳಲ್ಲಿ ಆರನೇ ಸೋಲಿನ ಕಹಿಯುಂಡಿದ್ದು, ಏಳನೇ ಸ್ಥಾನದಲ್ಲಿದೆ.

ರಾಜಸ್ಥಾನ್‍ನ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆಟವಾಡಿ ನಾಲ್ಕು ಓವರ್‍ಗಳಲ್ಲೇ 46 ರನ್ ಪೇರಿಸಿ ಗೆಲುವಿಗೆ ಬುನಾದಿ ಹಾಕಿಕೊಟ್ಟರು.

ನಾಲ್ಕನೇ ಓವರ್‍ನಲ್ಲಿ ರಬಾಡ ಬೌಲಿಂಗ್‍ಗೆ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ ಬಟ್ಲರ್ ಅಬ್ಬರಿಸಿದರು. ಅದೇ ಓವರ್‍ನ ಕೊನೆಯ ಎಸೆತದಲ್ಲಿ ರಬಾಡಾಗೆ ವಿಕೆಟ್ ಒಪ್ಪಿಸಿದರು. ಒಟ್ಟು 16 ಎಸೆತಗಳನ್ನು ಎದುರಿಸಿದ ಬಟ್ಲರ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್‍ನೊಂದಿಗೆ 30 ರನ್ ಗಳಿಸಿದರು. ಈ ಮೂಲಕ ಪ್ರಸಕ್ತ ಸಾಲಿನ ಐಪಿಎಲ್‍ನಲ್ಲಿ 600 ರನ್ ಸಾಧನೆ ಮಾಡಿದರು.

ಪವರ್ ಪ್ಲೇ ಅಂತ್ಯಕ್ಕೆ ರಾಜಸ್ಥಾನ್ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು. ನಾಯಕ ಸಂಜು ಸ್ಯಾಮ್ಸನ್ 23 ರನ್‍ಗಳ (12 ಎಸೆತ, 4 ಬೌಂಡರಿ) ಕಾಣಿಕೆ ನೀಡಿದರು. ನಂತರದಲ್ಲಿ ಜೊತೆಯಾದ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಮೂರನೇ ವಿಕೆಟ್‍ಗೆ ಮಹತ್ವದ 50 ರನ್‍ಗಳ ಜೊತೆಯಾಟವನ್ನಾಡಿ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಆಕರ್ಷಕ ಬ್ಯಾಟಿಂಗ್ ಮೂಲಕ ಜೈಸ್ವಾಲ್, ಕೇವಲ 33 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರು. ಈ ಮೂಲಕ ತಮ್ಮ ಸಾಮಥ್ರ್ಯವನ್ನು ಸಾಬೀತು ಮಾಡಿದರು.

41 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 68 ರನ್ ಗಳಿಸಿದರು. ಅವರ ಈ ಬಿರುಸಿನ ಇನ್ನಿಂಗ್ಸ್‍ನಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದ್ದವು. ಅಂತಿಮ 30 ಎಸೆತಗಳಲ್ಲಿ ರಾಜಸ್ಥಾನ್ ಗೆಲುವಿಗೆ 47 ರನ್ ಬೇಕಾಗಿತ್ತು. ಈ ವೇಳೆ ಬಿರುಸಿನ ಆಟವಾಡಿದ ಶಿಮ್ರಾನ್ ಹೆಟ್ಮೆಯರ್ ಆರ್‍ಆರ್‍ಗೆ ಅರ್ಹ ಗೆಲುವು ಒದಗಿಸಿಕೊಡಲು ನೆರವಾದರು. ಅವರಿಗೆ ದೇವದತ್ತ ಪಡಿಕ್ಕಲ್ ತಕ್ಕ ಸಾಥ್ ಕೊಟ್ಟರು.

ಅಂತಿಮವಾಗಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಕೇವಲ 16 ಎಸೆತಗಳನ್ನು ಎದುರಿಸಿದ ಹೆಟ್ಮೆಯರ್ 31 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಪಡಿಕ್ಕಲ್ 32 ಎಸೆತಗಳಲ್ಲಿ 31 ರನ್ ಗಳಿಸಿದರು. ಪಂಜಾಬ್ ಪರ ಅರ್ಶದೀಪ್ ಎರಡು ವಿಕೆಟ್ ಗಳಿಸಿದರು.

ಈ ಮೊದಲು ಜಾನಿ ಬೆಸ್ಟೊನ ಆಕರ್ಷಕ ಅರ್ಧಶತಕದ ನೆರವಿನಿಂದ (56) ಪಂಜಾಬ್ ಕಿಂಗ್ಸ್ ತಂಡವು ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಪಂಜಾಬ್ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಜಾನಿ ಬಿರುಸಿನ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದರು. ಅಲ್ಲದೆ ಮೊದಲ ವಿಕೆಟ್‍ಗೆ ಶಿಖರ್ ಧವನ್ ಜೊತೆಗೆ 5.1 ಓವರ್‍ಗಳಲ್ಲಿ 47 ರನ್‍ಗಳ ಜೊತೆಯಾಟದಲ್ಲಿ ಭಾಗಿಯಾದರು. ಧವನ್ 12 ರನ್ ಗಳಿಸಿ ಔಟ್ ಆದರು. ಭಾನುಕ ರಾಜಪಕ್ಸ 27 ರನ್‍ಗಳ (18 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದಿದ್ದು ಯಜುವೇಂದ್ರ ಚಾಹಲ್‍ಗೆ ತಮ್ಮ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. 15ನೇ ಓವರ್‍ನಲ್ಲಿ ನಾಯಕ ಮಯಂಕ್ ಅಗರವಾಲ್ (15) ಹಾಗೂ ಬೆಸ್ಟೊ ವಿಕೆಟ್ ಗಳಿಸಿದ ಚಾಹಲ್ ಡಬಲ್ ಆಘಾತ ನೀಡಿದರು. 40 ಎಸೆತಗಳನ್ನು ಎದುರಿಸಿದ ಬೆಸ್ಟೊ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು.

ಕೊನೆಯ ಹಂತದಲ್ಲಿ ಜಿತೇಶ್ ಶರ್ಮಾ ಹಾಗೂ ಲಿಯಾಮ್ ಲಿವಿಂಗ್‍ಸ್ಟೋನ್ ಅರ್ಧಶತಕದ ಜೊತೆಯಾಟ ಕಟ್ಟುವ ಮೂಲಕ ಪಂಜಾಬ್ ಸವಾಲಿನ ಮೊತ್ತವನ್ನು ಪೇರಿಸಲು ನೆರವಾದರು. ಈ ಮೂಲಕ ಪಂಜಾಬ್ ಐದು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. 18 ಎಸೆತಗಳನ್ನು ಎದುರಿಸಿದ ಜಿತೇಶ್ 38 ರನ್ (18 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು. ಮತ್ತೊಂದೆಡೆ ಲಿವಿಂಗ್‍ಸ್ಟೋನ್ 22 ರನ್ (14 ಎಸೆತ, 2 ಸಿಕ್ಸರ್) ಗಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *