ಪಾಂಡ್ಯ ಆಲ್‍ರೌಂಡರ್ ಆಟ ರಾಜಸ್ಥಾನ ಪರದಾಟ – ಮುಂದುವರಿದ ಗುಜರಾತ್ ಗೆಲುವಿನ ಓಟ

Public TV
2 Min Read

ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಆಟಕ್ಕೆ ರಾಜಸ್ಥಾನ ಥಂಡ ಹೊಡೆದಿದೆ. ರಾಜಸ್ಥಾನ ವಿರುದ್ಧ ಗುಜರಾತ್ 37 ರನ್‌ಗಳ ಅಂತರದ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಗುಜರಾತ್ ಪರ ಬ್ಯಾಟಿಂಗ್‍ನಲ್ಲಿ ಪಾಂಡ್ಯ, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್ ಮಿಂಚಿದರೆ, ಬೌಲಿಂಗ್‍ನಲ್ಲಿ ಲಾಕಿ ಫರ್ಗುಸನ್, ಯಶ್ ದಯಾಳ್ ಕಮಾಲ್ ಮಾಡಿದರು.

ಗೆಲ್ಲಲು 193 ರನ್‍ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಶೂನ್ಯ ಸುತ್ತಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರು ಜೋಸ್ ಬಟ್ಲರ್ ಮಾತ್ರ ಎಂದಿನಂತೆ ಹೊಡಿಬಡಿ ಆಟದ ಮೂಲಕ ಗಮನಸೆಳೆದರು. ಆದರೆ 54 ರನ್ (24 ಎಸೆತ, 8 ಬೌಂಡರಿ, 3 ಸಿಕ್ಸ್)ಗಳಿಗೆ ಬಟ್ಲರ್ ಆಟ ಕೊನೆಗೊಂಡಿತು. ಆ ಬಳಿಕ ಶಿಮ್ರಾನ್ ಹೆಟ್ಮೆಯರ್ 29 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಗುಜರಾತ್ ಬೌಲರ್‍ಗಳಿಗೆ ಕಾಡಿದರು. ಅಂತಿಮವಾಗಿ ರಾಜಸ್ಥಾನ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌  ಕಳೆದುಕೊಂಡು 155 ರನ್‌ ಗಳಿಸಲಷ್ಟೇ ಶಕ್ತವಾಗಿ 37 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಹಾರ್ದಿಕ್ ಪಾಂಡ್ಯ ಆರ್ಭಟ
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಗುಜರಾತ್ ತಂಡ ಆರಂಭದಲ್ಲೇ ಅಗ್ರ ಕ್ರಮಾಂಕದ ಮೂರು ವಿಕೆಟ್‍ಗಳನ್ನು 53 ರನ್‍ಗಳಿಗೆ ಕಳೆದುಕೊಂಡಿತು. ಆ ಬಳಿಕ ಒಂದಾದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಅಭಿನವ್ ಮನೋಹರ್ ಗುಜರಾತ್ ತಂಡಕ್ಕೆ ಚೇತರಿಕೆ ನೀಡಿದರು.

ಒಂದುಕಡೆ ಪಾಂಡ್ಯ ಅಬ್ಬರಿಸಲು ಪ್ರಾರಂಭಿಸುತ್ತಿದ್ದಂತೆ ಅಭಿನವ್ ಮನೋಹರ್ ಕೂಡ ಮನಮೋಹಕ ಹೊಡೆತಗಳಿಗೆ ಮುಂದಾದರು. ಈ ಜೋಡಿ 4ನೇ ವಿಕೆಟ್‍ಗೆ 86 ರನ್ (55 ಎಸೆತ) ಒಟ್ಟುಗೂಡಿಸಿತು. ಅಭಿನವ್ ಮನೋಹರ್ 43 ರನ್ (28 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು.

ಬಳಿಕ ಬಂದ ಡೇವಿಡ್ ಮಿಲ್ಲರ್ ರಾಜಸ್ಥಾನ್ ಬೌಲರ್‌ಗಳಿಗೆ ಕಂಟಕವಾದರು. ಇನ್ನೊಂದೆಡೆ ಪಾಂಡ್ಯ ಮಾತ್ರ ರಾಜಸ್ಥಾನ ಬೌಲರ್‌ಗಳ ಮುಂದೆ ತಮ್ಮ ಪರಾಕ್ರಮ ಮೆರೆದರು. ಈ ಜೋಡಿ ಅಜೇಯ 53 ರನ್ (25 ಎಸೆತ) ಸಿಡಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಿದರು. ಅಂತಿಮವಾಗಿ ಪಾಂಡ್ಯ ಅಜೇಯ 87 ರನ್ (52 ಎಸೆತ, 8 ಬೌಂಡರಿ, 4 ಸಿಕ್ಸ್) ಮತ್ತು ಮಿಲ್ಲರ್ 31 ರನ್ (14 ಎಸೆತ, 5 ಬೌಂಡರಿ, 1 ಸಿಕ್ಸ್) ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.

Share This Article
Leave a Comment

Leave a Reply

Your email address will not be published. Required fields are marked *