ಪಂಜಾಬ್‍ಗೆ ಪಂಚ್ ನೀಡಿದ ರಾಹುಲ್ ತೆವಾಟಿಯಾ – ಗುಜರಾತ್‍ಗೆ ರೋಚಕ ಜಯ

Public TV
2 Min Read

ಮುಂಬೈ: ಕೊನೆಯ ಎಸೆತದವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಸಿಡಿಸಿದ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳ ನೆರವಿನಿಂದ ಪಂಜಾಬ್ ವಿರುದ್ಧ ಗುಜರಾತ್ 6 ವಿಕೆಟ್‍ಗಳ ರೋಚಕ ಜಯ ಸಾಧಿಸಿತು.

ಗೆದ್ದಿದ್ದು ಹೇಗೆ:
ಕೊನೆಯ 12 ಎಸೆತಗಳಲ್ಲಿ 32 ರನ್ ಬೇಕಾಗಿತ್ತು 18ನೇ ಓವರ್‌ನಲ್ಲಿ 13 ರನ್ ಬಂತು. 6 ಎಸೆತಗಳಲ್ಲಿ 19 ರನ್ ಬೇಕಿತ್ತು. ಕೊನೆಯ ಓವರ್ ಎಸೆದ ಓಡನ್ ಸ್ಮಿತ್ ಅವರ ಮೊದಲ ಎಸೆತದಲ್ಲಿ 1 ರನ್ ಬಂತು. ಎರಡನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟ್ ಆದರು. ಮೂರನೇ ಎಸೆತದಲ್ಲಿ 4 ರನ್, 4ನೇ ಎಸೆತದಲ್ಲಿ 1 ರನ್ ಬಂತು. ಕೊನೆಯ 2 ಎಸೆತಗಳಲ್ಲಿ ಗುಜರಾತ್ ಗೆಲುವಿಗೆ 12 ರನ್ ಬೇಕಿತ್ತು. ರಾಹುಲ್ ತೆವಾಟಿಯಾ ಕೊನೆಯ 2 ಎಸೆತಗಳನ್ನು ಸಿಕ್ಸರ್‌ಗಟ್ಟಿ ಗುಜರಾತ್‍ಗೆ 6 ವಿಕೆಟ್‍ಗಳ ಜಯ ತಂದುಕೊಟ್ಟರು.

ಪಂಜಾಬ್ ನೀಡಿದ 190 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡ ಆರಂಭದಲ್ಲೇ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ 6 ರನ್ (7 ಎಸೆತ, 1 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಗಿಲ್ ಮತ್ತು ಸಾಯಿ ಸುದರ್ಶನ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಸಾಯಿ ಸುದರ್ಶನ್ 35 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಗಿಲ್ ಜೊತೆ 101 ರನ್ (68 ಎಸೆತ)ಗಳ ಜೊತೆಯಾಟವಾಡಿದರು. ಗಿಲ್ 96 ರನ್ (59 ಎಸೆತ, 11 ಬೌಂಡರಿ, 1 ಸಿಕ್ಸ್) ವೇಳೆ ಔಟ್ ಆಗಿ ಶತಕ ವಂಚಿತರಾದರು.

ಈ ಮೊದಲು ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಈ ಪಂದ್ಯದಲ್ಲೂ ಕೂಡ ನಾಯಕ ಮಯಾಂಕ್ ಅಗರ್‌ವಾಲ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್ 35 ರನ್ (30 ಎಸೆತ, 4 ಬೌಂಡರಿ) ಬಾರಿಸಿ ಔಟ್ ಆದರು.


ಆ ಬಳಿಕ ಲಿಯಾಮ್ ಲಿವಿಂಗ್ಸ್ಟೋನ್ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದರು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಲಿವಿಂಗ್ಸ್ಟೋನ್ ಬೌಂಡರಿ, ಸಿಕ್ಸರ್‌ಗಳ ಅಬ್ಬರದ ಆಟದ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು. ಆದರೆ 64 ರನ್ (27 ಎಸೆತ, 7 ಬೌಂಡರಿ, 4 ಸಿಕ್ಸ್) ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಆ ಬಳಿಕ ಮತ್ತೆ ಪಂಜಾಬ್ ಕುಸಿತ ಕಂಡಿತು. ಅಂತಿಮವಾಗಿ ರಾಹುಲ್ ಚಹರ್ ಬಿರುಸಿನ ಅಜೇಯ 22 ರನ್ (14 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು.

ಅಂತಿಮವಾಗಿ 20 ಓವರ್‌ಗಳಲ್ಲಿ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 189 ರನ್ ಕಲೆ ಹಾಕಿತು. ಗುಜರಾತ್ ಪರ ರಶೀದ್ ಖಾನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ದರ್ಶನ್ ನಲ್ಕಂಡೆ 2, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *