ಕೊನೆಯ ಓವರ್‌ನಲ್ಲಿ ರಸೆಲ್ ವಿಕೆಟ್ ಲಾಸ್ – ಗುಜರಾತ್‍ಗೆ 8 ರನ್‍ಗಳ ಜಯ

Public TV
2 Min Read

ಮುಂಬೈ: ಆಂಡ್ರೆ ರಸೆಲ್ ಆಲ್‍ರೌಂಡರ್ ಆಟದ ನಡುವೆಯೂ ಕೊನೆಯಲ್ಲಿ ಮೇಲುಗೈ ಸಾಧಿಸಿದ ಗುಜರಾತ್ ಬೌಲರ್‌ಗಳು ಕೋಲ್ಕತ್ತಾ ವಿರುದ್ಧ 8 ರನ್‍ಗಳ ಜಯ ತಂದುಕೊಟ್ಟರು.

ಕೋಲ್ಕತ್ತಾ ಗೆಲುವಿಗೆ ಕೊನೆಯ ಓವರ್‌ನಲ್ಲಿ 6 ಎಸೆತಗಳಲ್ಲಿ 18 ರನ್ ಬೇಕಾಗಿತ್ತು. 20ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗಟ್ಟಿದ ರಸೆಲ್ ಮರು ಎಸೆತದಲ್ಲಿ ಕ್ಯಾಚ್ ನೀಡಿ ಔಟ್ ಆಗುವುದರೊಂದಿಗೆ ತಂಡದ ಗೆಲುವಿನ ಆಸೆ ಕಮರಿತು. ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಸಿಡಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ಗುಜರಾತ್ ನೀಡಿದ 157 ರನ್‍ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. 34 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರಿಂಕು ಸಿಂಗ್ 35 ರನ್ (28 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ನೆರವಾದರು. ಇವರನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‍ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಕೈ ಚೆಲ್ಲಿ ಪೆವಿಲಿಯನ್ ಸೇರಿಕೊಂಡರು. ರೆಸೆಲ್ 48 ರನ್ (25 ಎಸೆತ, 1 ಬೌಂಡರಿ, 6 ಸಿಕ್ಸರ್) ಚಚ್ಚಿ ಮಿಂಚಿದರು.

ಈ ಮೊದಲು ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಗುಜರಾತ್‍ಗೆ ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್ 7 ರನ್‍ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ವೃದ್ಧಿಮಾನ್ ಸಹಾ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿ 2ನೇ ವಿಕೆಟ್‍ಗೆ 75 ರನ್ (56 ಎಸೆತ) ಒಟ್ಟುಗೂಡಿಸಿದರು. ಈ ವೇಳೆ ಉತ್ತಮವಾಗಿ ಆಡುತ್ತಿದ್ದ ಸಹಾ 25 ರನ್ (25 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ನೀಡಿ ಹೊರನಡೆದರು.

ನಂತರ ಒಂದಾದ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ 3ನೇ ವಿಕೆಟ್‍ಗೆ ಕೆಲಕಾಲ ಬೌಂಡರಿ, ಸಿಕ್ಸರ್ ಸಿಡಿಸಿ 50 ರನ್ (35 ಎಸೆತ) ಜೊತೆಯಾಟವಾಡಿ ದೊಡ್ಡ ಮೊತ್ತ ಪೇರಿಸುವ ಸೂಚನೆ ನೀಡಿದರು. ಆದರೆ ಮಿಲ್ಲರ್ ಆಟ 27 ರನ್ (20 ಎಸೆತ, 1 ಬೌಂಡರಿ, 1 ಸಿಕ್ಸ್)ಗೆ ಅಂತ್ಯ ಗೊಂಡಿತು.

ಈ ನಡುವೆ ಪಾಂಡ್ಯ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಪಾಂಡ್ಯ 67 ರನ್ (49 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಟಿಮ್ ಸೌಥಿ ವಿಕೆಟ್ ಬೇಟೆಯಾಡಿ ಪಾಂಡ್ಯಗೆ ಬ್ರೇಕ್ ಹಾಕಿದರು.

ರಸೆಲ್ ಬಿಗಿ ದಾಳಿ ಕುಸಿದ ಗುಜರಾತ್:
138 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಗುಜರಾತ್ ದಿಢೀರ್ ಕುಸಿತ ಕಂಡಿತು. ಆಂಡ್ರೆ ರಸೆಲ್ 4 ವಿಕೆಟ್ (1 ಓವರ್ 5 ರನ್) ಕಿತ್ತು ಗುಜರಾತ್ ಬ್ಯಾಟ್ಸ್‍ಮ್ಯಾನ್‍ಗಳ ಮೇಲೆ ಮಾರಕವಾಗಿ ಎರಗಿದರು. ಗುಜರಾತ್ 18 ರನ್‍ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್ ಪೇರಿಸಿತು.

ಕೋಲ್ಕತ್ತಾ ಪರ ರೆಸೆಲ್ 4 ವಿಕೆಟ್ ಕಿತ್ತು ಮಿಂಚಿದರು. ಟಿಮ್ ಸೌಥಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ 1 ಮತ್ತು ಶಿವಂ ಮಾವಿ 1 ವಿಕೆಟ್ ಕಿತ್ತರು.

Share This Article
Leave a Comment

Leave a Reply

Your email address will not be published. Required fields are marked *