ಲಕ್ನೋಗೆ ಲಾಕ್ ಹಾಕಿದ ಟೈಟಾನ್ಸ್ – ಗುಜರಾತ್‍ಗೆ 5 ವಿಕೆಟ್‍ಗಳ ಜಯ

By
2 Min Read

ಮುಂಬೈ: ಕೊನೆಯ ಓವರ್ ವರೆಗೆ ರೋಚಕವಾಗಿ ಕೂಡಿದ್ದ ಪಂದ್ಯದಲ್ಲಿ ಲಕ್ನೋ ವಿರುದ್ಧ ಮೇಲುಗೈ ಸಾಧಿಸಿದ ಗುಜರಾತ್ ತಂಡ ಗೆಲುವಿನ ನಗೆ ಬೀರಿತು.

ಕೊನೆಯ 2 ಓವರ್‍ಗಳಲ್ಲಿ 20 ರನ್ ಬೇಕಾಗಿತ್ತು. ಬಳಿಕ 6 ಎಸೆತಗಳಿಗೆ 11 ರನ್ ಬೇಕಾಗಿತ್ತು. ಕೊನೆಯ ಓವರ್ ಎಸೆದ ಆವೇಶ್ ಖಾನ್‍ರ ಎರಡು ಎಸೆತಗಳನ್ನು ಕನ್ನಡಿಗ ಅಭಿನವ್ ಮನೋಹರ್ ಬೌಂಡರಿಗಟ್ಟಿದರು. ಬಳಿಕ ಒಂದು ಸಿಂಗಲ್ ರನ್ ಕಸಿದರು. ಬಳಿಕ 3 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಈ ವೇಳೆ ರಾಹುಲ್ ತೆವಾಟಿಯಾ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಮೊದಲು ಲಕ್ನೋ ನೀಡಿದ 159 ರನ್‍ಗಳ ಗುರಿ ಬೆನ್ನಟ್ಟಿದ ಗುಜರಾತ್ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಶುಭಮನ್ ಗಿಲ್ ಡಕ್ ಔಟ್ ಆದರು. ನಂತರ ಬಂದ ವಿಜಯ್ ಶಂಕರ್ ಬ್ಯಾಟ್‍ನಿಂದ ಸಿಡಿದಿದ್ದು, ಕೇವಲ 4 ರನ್. ಆ ಬಳಿಕ ಒಂದಾದ ಮ್ಯಾಥ್ಯೂ ವೇಡ್ ಮತ್ತು ಹಾರ್ದಿಕ್ ಪಾಂಡ್ಯ ಕೆಲ ಹೊತ್ತು ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರು.ಈ ಜೋಡಿ 3ನೇ ವಿಕೆಟ್‍ಗೆ 57 ರನ್ (48 ಎಸೆತ) ಜೊತೆಯಾಟವಾಡಿತು. ಪಾಂಡ್ಯ 33 ರನ್ (28 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ವೇಡ್ 30 ರನ್ (29 ಎಸೆತ, 4 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ರಾಹುಲ್ ತೆವಾಟಿಯಾ ಅಜೇಯ 40 ರನ್ (24 ಎಸೆತ, 5 ಬೌಂಡರಿ, 2 ಸಿಕ್ಸ್) ಮತ್ತು ಭಿನವ್ ಮನೋಹರ್ 15 ರನ್ (7 ಎಸೆತ, 3 ಬೌಂಡರಿ) ಸಿಡಿಸಿ19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಸಿಡಿಸಿ 5 ವಿಕೆಟ್‍ಗಳ ಗೆಲುವು ದಾಖಲಿಸಿದೆ.

ಬೃಹತ್ ಮೊತ್ತ ಪೇರಿಸುವ ವಿಶ್ವಾಸದೊಂದಿಗೆ ಮೊದಲು ಬ್ಯಾಟಿಂಗ್ ಆರಂಭಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲೆ ಸಾಲು, ಸಾಲು ವಿಕೆಟ್ ಕಳೆದುಕೊಂಡು ಸಾಗಿತು. ನಾಯಕ ಕೆ.ಎಲ್ ರಾಹುಲ್ ಡಕ್ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಇವರ ಹಿಂದೆ ಕ್ವಿಂಟನ್ ಡಿ ಕಾಕ್ 7, ಎವಿನ್ ಲೆವಿಸ್ 10, ಮನೀಶ್ ಪಾಂಡೆ 6 ರನ್ ಸಿಡಿಸಿ ಪೆವಿಲಯನ್‍ಗೆ ಹೆಜ್ಜೆ ಹಾಕಿದರು. 4 ಓವರ್‌ಗಳಲ್ಲಿ ಲಕ್ನೋ ತಂಡದ ವೇಗಿಗಳು ಗುಜರಾತ್ ತಂಡದ ಅಗ್ರ ಕ್ರಮಾಂಕದ ಹೆಡೆಮುರಿ ಕಟ್ಟಿದರು.

ಬಳಿಕ ದೀಪಕ್ ಹೂಡಾ ಮತ್ತು ಆಯುಷ್ ಬದೋನಿ ಗುಜರಾತ್ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ಆಸರೆಯಾದರು. ಕೆಲ ಕ್ರಮಾಂಕದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಜೋಡಿ 5ನೇ ವಿಕೆಟ್‍ಗೆ 87 ರನ್ (68 ಎಸೆತ) ಜೊತೆಯಾಟವಾಡಿತು. ಅಲ್ಲದೆ ತಲಾ ಅರ್ಧಶತಕ ಹೊಡೆತು ಸಂಭ್ರಮಿಸಿದರು. ದೀಪಕ್ ಹೂಡಾ 55 ರನ್, 41 ಎಸೆತ, 6 ಬೌಂಡರಿ, 2 ಸಿಕ್ಸ್) ಮತ್ತು ಆಯುಷ್ ಬದೋನಿ 54 ರನ್ (41 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ಗಮನಸೆಳೆದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಕೃನಾಲ್ ಪಾಂಡ್ಯ ಅಜೇಯ 21 ರನ್ (13 ಎಸೆತ, 3 ಬೌಂಡರಿ) ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಕಲೆ ಹಾಕಿತು.

ಗುಜರಾತ್ ಪರ ಶಮಿ 3 ವಿಕೆಟ್ ಕಿತ್ತು ಶೈನ್ ಆದರು. ವರುಣ್ ಆರೋನ್ 2 ವಿಕೆಟ್ ಮತ್ತು ರಶೀದ್ ಖಾನ್ 1 ವಿಕೆಟ್ ಹಂಚಿಕೊಂಡರು.

 

Share This Article
Leave a Comment

Leave a Reply

Your email address will not be published. Required fields are marked *