ಈ ವರ್ಷ ಆಡದೇ ಇದ್ದರೂ ಆರ್ಚರ್‌ಗೆ ಮುಂಬೈ 8 ಕೋಟಿ ನೀಡಿದ್ದು ಯಾಕೆ: ರಿವೀಲ್‌ ಮಾಡಿದ ಆಕಾಶ್‌ ಅಂಬಾನಿ

Public TV
2 Min Read

ಬೆಂಗಳೂರು: ಈ ವರ್ಷ ಐಪಿಎಲ್‌ ಆಡದೇ ಇದ್ದರೂ ಜೋಫ್ರಾ ಆರ್ಚರ್‌ ಅವರನ್ನು ಮುಂಬೈ ಇಂಡಿಯನ್ಸ್‌ 8 ಕೋಟಿ ರೂ. ಖರೀದಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಮಾಲಕಿ ನೀತಾ ಅಂಬಾನಿ ಪುತ್ರ ಆಕಾಶ್‌ ಅಂಬಾನಿ ತಿಳಿಸಿದ್ದಾರೆ.

ವರ್ಚುಯಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ದಿನದ ಹರಾಜಿನ ನಂತರ ಉಳಿದಿರುವ ವೇಗದ ಬೌಲರ್‌ಗಳ ಪೈಕಿ ಜೋಫ್ರಾ ಆರ್ಚರ್ ಖರೀದಿಸುವ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಿದೆವು. ಈ ವರ್ಷ ಅವರು ಲಭ್ಯ ಇರುವುದಿಲ್ಲ. ಫಿಟ್‌ ಆದಾಗ ಬುಮ್ರಾ, ಆರ್ಚರ್‌ ಜೋಡಿ ಬೌಲಿಂಗ್‌ನಲ್ಲಿ ನಮಗೆ ಬಲ ತುಂಬಬಹುದು ಎಂದು ಹೇಳಿದ್ದಾರೆ.

ಶನಿವಾರ ರಾತ್ರಿಯೇ ಆರ್ಚರ್‌ ಅವರನ್ನು ಖರೀದಿಸುವ ಬಗ್ಗೆ ನಿರ್ಧಾರ ಮಾಡಲಾಯಿತು. ತಂಡಕ್ಕೆ ವೇಗದ ಬೌಲರ್‌ ಬೇಕು ಎಂದಾಗ ನಮ್ಮ ಆಯ್ಕೆ ಆರ್ಚರ್‌ ಆಗಿತ್ತು. ಈ ಕಾರಣಕ್ಕೆ ಬಜೆಟ್‌ ಅನ್ನು ಮೊದಲೇ ಸಿದ್ಧಪಡಿಸಿ ಶನಿವಾರ ರಾತ್ರಿಯೇ ಫೈನಲ್‌ ಮಾಡಿದ್ದೆವು ಎಂದು ತಿಳಿಸಿದರು. ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಮತೋಲನ ಹೊಂದಿರುವ ಮುಂಬೈ 5 ಬಾರಿ ಚಾಂಪಿಯನ್‌ ಆಗಿದೆ. ಹೀಗಾಗಿ 2023ರ ಐಪಿಎಲ್‌ ಅನ್ನು ಗಮನದಲ್ಲಿಟ್ಟುಕೊಂಡು ಆರ್ಚರ್‌ ಅವರನ್ನು ಖರೀದಿ ಮಾಡಿದೆ.

ಲಸಿತ್ ಮಲಿಂಗ ವಿದಾಯದ ಬಳಿಕ ಮುಂಬೈ ಇಂಡಿಯನ್ಸ್ ಹಲವು ವಿದೇಶಿ ಬೌಲರ್‌ಗಳನ್ನು ಖರೀದಿ ಮಾಡಿದೆ. ಆದರೆ ಯಾರೂ ಅಷ್ಟೊಂದು ಯಶಸ್ವಿಯಾಗಿಲ್ಲ. ಹೀಗಾಗಿ ಬುಮ್ರಾ, ಆರ್ಚರ್‌ ಜೋಡಿ ಒಂದಾದರೆ ಬೌಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಬಹುದು ಎಂಬ ಲೆಕ್ಕಾಚಾರವನ್ನು ಮುಂಬೈ ಹಾಕಿಕೊಂಡಿದೆ.  ಇದನ್ನೂ ಓದಿ: ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

ಗಾಯಗೊಂಡಿರುವ ಜೋಫ್ರಾ ಆರ್ಚರ್ 2021ರ ಐಪಿಎಲ್ ಟೂರ್ನಿಯಿಂದಲೂ ಹೊರಗುಳಿದಿದ್ದರು. ಟಿ20 ವಿಶ್ವಕಪ್ ಟೂರ್ನಿ ಕಾರಣ ಜೋಫ್ರಾ ಐಪಿಎಲ್ ಟೂರ್ನಿಯಿಂದ ದೂರ ಉಳಿದಿದ್ದರು. ಇದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭಾರೀ ಹೊಡೆತ ನೀಡಿತ್ತು.

ಐಪಿಎಲ್ ಟೂರ್ನಿಯಲ್ಲಿ ಒಟ್ಟು 35 ಪಂದ್ಯಗಳನ್ನು ಆಡಿರುವ ಜೋಫ್ರಾ ಆರ್ಚರ್ 46 ವಿಕೆಟ್ ಪಡೆದಿದ್ದಾರೆ. 15 ರನ್ ನೀಡಿ 3 ವಿಕೆಟ್ ಕಬಳಿಸಿರುವುದು ಜೋಫ್ರಾ ಅತ್ಯುತ್ತಮ ಸಾಧನೆಯಾಗಿದೆ. ಇಂಗ್ಲೆಂಡ್ ಪರ 12 ಟಿ20 ಪಂದ್ಯ ಆಡಿರುವ ಜೋಫ್ರಾ ಆರ್ಚರ್ 14 ವಿಕೆಟ್ ಉರುಳಿಸಿದ್ದಾರೆ. 13 ಟೆಸ್ಟ್ ಪಂದ್ಯ ಹಾಗೂ 17 ಏಕದಿನ ಪಂದ್ಯವನ್ನೂ ಆಡಿದ್ದಾರೆ.  ಇದನ್ನೂ ಓದಿ: ಐಪಿಎಲ್ ಹರಾಜು ಅಂತ್ಯ – ಫ್ರಾಂಚೈಸ್‍ಗಳಿಗೆ ಬೇಡವಾದ ಸ್ಟಾರ್ ಆಟಗಾರರು

Share This Article
Leave a Comment

Leave a Reply

Your email address will not be published. Required fields are marked *