ಕೊಹ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ: ಆರ್‌ಸಿಬಿ ಸ್ಪಷ್ಟನೆ

Public TV
1 Min Read

ಬೆಂಗಳೂರು: ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕುವ ಬಗ್ಗೆ ತಂಡ ಯೋಚಿಸುತ್ತಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಿರ್ದೇಶಕ ಮೈಕ್ ಹೆಸ್ಸನ್ ಸ್ಪಷ್ಟಪಡಿಸಿದ್ದಾರೆ.

ಸ್ಫೋಟಕ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ ತಂಡದ ಪ್ರಬಲ ಅಸ್ತ್ರವಾಗಿದ್ದಾರೆ. ನಿರಂತರ ನಾಯಕತ್ವದಿಂದಾಗಿ ಯಾವ ಕ್ಷೇತ್ರಗಳನ್ನು ಸುಧಾರಿಸಬೇಕೆಂಬುದು ಅವರಿಗೆ ತಿಳಿದಿರುತ್ತದೆ. ಹೀಗಾಗಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮೈಕ್ ಹಸ್ಸನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ ಗೆಲ್ಲಲು ಆರ್‌ಸಿಬಿ ಕೋಚಿಂಗ್ ವಿಭಾಗದಲ್ಲಿ ಮುಖ್ಯ ಬದಲಾವಣೆ

ಟೀಂ ಇಂಡಿಯಾದ ಫಿಟ್ನೆಸ್ ತರಬೇತುದಾರರಾಗಿದ್ದ ಶಂಕರ್ ಬಸು ಈಗ ಆರ್‌ಸಿಬಿಗೆ ತರಬೇತುದಾರರಾಗಿ ಸೇರಿದ್ದಾರೆ. 2015ರಲ್ಲಿ ಟೀಂ ಇಂಡಿಯಾ ಸೇರುವ ಮೊದಲೇ ಶಂಕರ್ ಬಸು ಆರ್‌ಸಿಬಿ ಜೊತೆಗಿದ್ದರು. ಬಸು ದೇಶದ ಅತ್ಯುತ್ತಮ ತರಬೇತುದಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಶ್ರೀಧರನ್ ಶ್ರೀರಾಮ್ ಅವರನ್ನು ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ.

ಐಪಿಎಲ್ ಟೂರ್ನಿಯ ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನ ನೀಡಿದೆ. ಇಲ್ಲಿಯವರೆಗೆ 12 ಆವೃತ್ತಿಗಳು ನಡೆದಿದ್ದರೂ ಒಂದು ಬಾರಿಯೂ ಆರ್‍ಸಿಬಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ ನಾಯಕ ವಿರಾಟ್ ಕೊಹ್ಲಿ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಡಲು ತಂಡವು ನಿರ್ಧರಿಸಿದ್ದು, ಡಿವಿಲಿಯರ್ಸ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈ ಎಲ್ಲ ಊಹಾಪೋಹಗಳಿಗೆ ತಂಡವು ಸ್ಪಷ್ಟನೆ ನೀಡಿದೆ.

ವಿರಾಟ್ ಕೊಹ್ಲಿ 2008ರಿಂದ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ 2013ರಿಂದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಆವೃತ್ತಿಯಲ್ಲಿ ನಾಯಕರಾಗಿ ಒಂದು ತಂಡವನ್ನು ದೀರ್ಘ ಅವಧಿ ಮುನ್ನಡೆಸಿದ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *