ಐಪಿಎಲ್ ರದ್ದಾದ್ರೆ ಕೋಟಿ ಕೋಟಿ ನಷ್ಟ – ಯಾರಿಗೆ ಎಷ್ಟು? ಇಲ್ಲಿದೆ ಲೆಕ್ಕ

Public TV
2 Min Read

ಮುಂಬೈ: ಕೊರೊನಾ ವೈರಸ್‍ನಿಂದಾಗಿ ಪ್ರಪಂಚದಾದ್ಯಂತದ ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಎಲ್ಲಾ ಟೂರ್ನಿಗಳನ್ನು ಮುಂದೂಡಲಾಗುತ್ತಿದೆ ಅಥವಾ ರದ್ದುಗೊಳಿಸಲಾಗುತ್ತಿದೆ. ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಏಪ್ರಿಲ್ 15 ರವರೆಗೆ ಮುಂದೂಡಲ್ಪಟ್ಟಿದೆ. ಆದರೆ ಈ ವರ್ಷ ಟೂರ್ನಿ ನಡೆಯುತ್ತದೋ ಇಲ್ಲವೋ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.

ಬಿಸಿಸಿಐ ಮತ್ತು ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಶತಾಯಗತಾಯ ಟೂರ್ನಿ ನಡೆಸಿಯೇ ತೀರಬೇಕು ಎಂದು ಪ್ಲಾನ್ ರೂಪಿಸುತ್ತಿದ್ದಾರೆ. ಯಾಕೆ ಗೊತ್ತಾ? ಒಂದು ವೇಳೆ ಟೂರ್ನಿ ರದ್ದಾದರೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳು ಭಾರೀ ನಷ್ಟವಾಗಲಿದೆ. ಈ ವರ್ಷ ಐಪಿಎಲ್ ನಡೆಯದಿದ್ದರೆ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಬಿಸಿಸಿಐ 4 ಸಾವಿರ ಕೋಟಿ ರೂ.ಗಳ ನಷ್ಟವನ್ನು ಭರಿಸಬೇಕಾಗುತ್ತದೆ.

ಬಿಸಿಸಿಐ ಒಂದು ಆವೃತ್ತಿಯ ಪಂದ್ಯಗಳ ನೇರ ಪ್ರಸಾರಕ್ಕಾಗಿ 3,269 ಕೋಟಿ ರೂ. ಬ್ರಾಡ್‍ಕಾಸ್ಟರ್ ನಿಂದ ಪಡೆಯುತ್ತದೆ. ಸ್ಟಾರ್ ಸ್ಪೋರ್ಟ್ಸ್ ಐಪಿಎಲ್ ಪ್ರಸಾರ ಹಕ್ಕನ್ನು 5 ವರ್ಷಗಳ ಕಾಲ 16,347.5 ಕೋಟಿ ರೂ.ಗಳಿಗೆ ಖರೀದಿಸಿದೆ. ಒಂದು ಪಂದ್ಯಕ್ಕೆ 55 ಕೋಟಿ ರೂ. ಅಂದ್ರೆ ಪ್ರತಿ ಎಸೆತಕ್ಕೆ 23.3 ಲಕ್ಷ ರೂಪಾಯಿ ಲೆಕ್ಕಾಚಾರವಾಗುತ್ತದೆ.

ಬ್ರಾಡ್‍ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ 3,300 ಕೋಟಿ ರೂ.ಗಳ ಡಿಜಿಟಲ್ ಜಾಹೀರಾತು ಆದಾಯವನ್ನು ಗಳಿಸುತ್ತದೆ ಎಂದು ನಿರೀಕ್ಷಿಸಿತ್ತು. ಈಗಾಗಲೇ ಶೇ.90ರಷ್ಟು ಜಾಹೀರಾತು ಸ್ಲಾಟ್‍ಗಳನ್ನು ಮಾರಾಟವಾಗಿದೆ.

ಡಿಜಿಟಲ್ ಪ್ಲಾಟ್‍ಫಾರ್ಮ್ ನಲ್ಲಿ ಪಂದ್ಯವನ್ನು ಪ್ರಸಾರ ಮಾಡಲು ಬಿಸಿಸಿಐ ಫೇಸ್‍ಬುಕ್‍ನೊಂದಿಗೆ 399 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಪಂದ್ಯಾವಳಿ ನಡೆಯದಿದ್ದರೆ, ಮಂಡಳಿಯು ನಷ್ಟವನ್ನು ಅನುಭವಿಸಲಿದೆ.

ಆಟಗಾರರಿಗೆ ನೀಡಲು ಫ್ರ್ಯಾಂಚೈಸಿ 85 ಕೋಟಿ ಪಡೆಯುತ್ತದೆ. ಐಪಿಎಲ್ ನಡೆಯದಿದ್ದರೆ, 8 ತಂಡಗಳು ಆಟಗಾರರಿಗೆ 680 ಕೋಟಿ ಪಾವತಿಸಬೇಕಾಗಿಲ್ಲ. ಹೀಗಾಗಿ ಆಟಗಾರರು ಈ ಬಾರಿಯ ಸಂಭಾವನೆ ಕಳೆದುಕೊಳ್ಳುತ್ತಾರೆ.

ಐಪಿಎಲ್ ರದ್ದಾದರೆ ಫ್ರಾಂಚೈಸಿಗಳು ಪ್ರತಿ ಪಂದ್ಯದಿಂದ 2.5 ರಿಂದ 4 ಕೋಟಿ ಕಳೆದುಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ. ತಂಡಗಳು ಹೋರ್ಡಿಂಗ್, ಜರ್ಸಿ ಜಾಹೀರಾತಿನಿಂದ ಪ್ರತಿ ಪಂದ್ಯಕ್ಕೂ ಕಂಪನಿಗಳಿಂದ ಭಾರೀ ಮೊತ್ತದ ಹಣ ಪಡೆಯುತ್ತವೆ. ಪಂದ್ಯ ನಡೆಯದಿದ್ದರೆ ಅವರು ಹಣವನ್ನು ಕಳೆದುಕೊಳ್ಳಲಿದೆ.

ವಿವೋ ಐದು ವರ್ಷಗಳ ಕಾಲ 2,199 ಕೋಟಿ ರೂ.ಗಳಿಗೆ ಐಪಿಎಲ್ ಪ್ರಶಸ್ತಿ ಪ್ರಾಯೋಜಕತ್ವವನ್ನು ಹೊಂದಿದೆ. ಅಂದ್ರೆ ಒಂದು ಆವೃತ್ತಿಗೆ ಸುಮಾರು 439 ಕೋಟಿ ರೂ. ಪಾವತಿಸಲಾಗುತ್ತದೆ. ಹೀಗಾಗಿ ಪಂದ್ಯ ನಡೆಯದೆ ಹೋದಲ್ಲಿ ವಿವೋ 439 ಕೋಟಿ ರೂ. ಕಡಿತಗೊಳಿಸಲಿದೆ.

ಅಂತರರಾಷ್ಟ್ರೀಯ ಪಂದ್ಯಗಳ ಪ್ರಸಾರದಿಂದ ಬಿಸಿಸಿಐ ಕೋಟಿಗಟ್ಟಲೇ ಹಣ ಗಳಿಸುತ್ತದೆ. ಪ್ರತಿ ಪಂದ್ಯಕ್ಕೂ ಮಂಡಳಿಗೆ 60.1 ಕೋಟಿ ರೂ. ಹರಿದು ಬರುತ್ತದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ರದ್ದುಗೊಳಿಸಿದ್ದರಿಂದ ಬಿಸಿಸಿಐಗೆ 120.2 ಕೋಟಿ ರೂ. ನಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *