ಐಪಿಎಲ್ 11ರ ಮೊದಲ ಗೆಲುವು ಸವಿದ ರಾಯಲ್ ಚಾಲೆಂಜರ್ಸ್!

Public TV
3 Min Read

ಬೆಂಗಳೂರು: ಈ ಸಲ ಕಪ್ ನಮ್ಮದೇ ಎಂಬ ಅಭಿಮಾನಿಗಳ ಕನಸಿನೊಂದಿಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿದ ರಾಯಲ್ಸ್ ಚಾಲೆಂಜರ್ಸ್ ಬಳಗ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ 4 ವಿಕೆಟ್ ಗೆಲುವು ಪಡೆದು ಐಪಿಎಲ್‍ನ 11 ನೇ ಆವೃತ್ತಿಯಲ್ಲಿ ಗೆಲುವಿನ ಖಾತೆ ತೆರೆಯಿತು.

ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಡಿ ಕಾಕ್, ಎಬಿ ಡಿವಿಲಿಯರ್ಸ್ ಆರ್.ಸಿ.ಬಿ ಗೆಲುವಿಗೆ ಕಾರಣರಾದರು. ಪಂಜಾಬ್ ನ 156 ರನ್ ಸುಲಭ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ಮೊದಲ ಓವರ್ ನಲ್ಲೇ ಮ್ಯಾಕಲಮ್ ಶೂನ್ಯ ಸುತ್ತುವ ಮೂಲಕ ಅಘಾತ ಎದುರಿಸಿತು. ಬಳಿಕ ನಾಯಕ ಕೊಹ್ಲಿ ಹಾಗೂ ಡಿ ಕಾಕ್ ಜೋಡಿ ಬಿರುಸಿನ ಆಟ ಪ್ರದರ್ಶಿಸಿತು. ಈ ವೇಳೆ 21 ರನ್ ಗಳಿಸಿದ್ದ ಕೊಹ್ಲಿ ರೆಹಮಾನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಡಿ ಕಾಕ್ (34 ಎಸೆತ 45 ರನ್) ರನ್ನು ಪಂಜಾಬ್ ನಾಯಕ ಅಶ್ವಿನ್ ಪೆವಿಲಿಯನ್ ಸೇರುವಂತೆ ಮಾಡಿದರು.

ಈ ವೇಳೆ ಬ್ಯಾಟಿಂಗ್ ಇಳಿದ ಸ್ಫೋಟಕ ಆಟಗಾರ ಎಬಿಡಿ 40 ಎಸೆಗಳಲ್ಲಿ ಭರ್ಜರಿ ನಾಲ್ಕು ಸಿಕ್ಸರ್, 2 ಬೌಂಡರಿ ನೆರವಿನಿಂದ 57 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹ ಕೊಂಡೊಯ್ದರು. ಆದರೆ ಈ ವೇಳೆ ಮಿಂಚಿನ ದಾಳಿ ನಡೆಸಿದ ನೈಲ್ ಎಬಿಡಿ, ಮನ್ ದೀಪ್ ವಿಕೆಟ್ ಪಡೆದರು.

ಕೊನೆಯ 4 ಓವರ್ ನಲ್ಲಿ ರಾಯಲ್ ಚಾಲೆಂಜರ್ಸ್ 41 ರನ್ ಗಳಿಸಬೇಕಿತ್ತು. 17ನೇ ಓವರ್ ನಲ್ಲಿ ಡಿವಿಲಿಯರ್ಸ್ ಎರಡು ಸಿಕ್ಸರ್ ಸಿಡಿಸಿ ದರೆ, ಮನ್ ದೀಪ್ ಸಿಂಗ್ 1 ಬೌಂಡರಿ ಬಾರಿಸಿದರು. ಈ ಓವರ್ ನಲ್ಲಿ ಒಟ್ಟು 19 ರನ್ ಗಳಿಸಿತು. 18ನೇ ಓವರ್ ನಲ್ಲೂ ಎಬಿ ಡಿವಿಲಿಯರ್ಸ್ 1 ಸಿಕ್ಸ್ ಬಾರಿಸಿ ಒಟ್ಟಾರೆ 11 ಗಳಿಸಿದರು. ಆದರೆ 19ನೇ ಓವರ್ ನ  ಮೊದಲ ಬಾಲ್ ನಲ್ಲೇ ಆಕ್ರಮಣಕಾರಿಯಾಗಿ ಆಡಲು ಹೋದ ಡಿವಿಲಿಯರ್ಸ್ ಔಟಾದರು. ಇದೇ ಓವರ್ ನಲ್ಲೇ ಮನ್ ದೀಪ್ ಸಿಂಗ್ ಕೂಡಾ ಔಟಾದರು. ಪಂಜಾಬ್ ತಂಡ ಕೇವಲ 4 ರನ್ ಮಾತ್ರ ಈ ಓವರ್ ನಲ್ಲಿ ಬಿಟ್ಟುಕೊಟ್ಟಿತ್ತು. ಕೊನೆಯ ಓವರ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ 5 ರನ್ ಗಳಿಸಬೇಕಿತ್ತು. ಈ ವೇಳೆ ಬ್ಯಾಟಿಂಗ್ ಗೆ ಆಗಮಿಸಿದ್ದ ವಾಷಿಂಗ್ಟನ್ ಸುಂದರ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಕೊನೆಯ ಓವರ್ ನಲ್ಲಿ ಮೂರು ಎಸೆತಗಳು ಬಾಕಿ ಇರುವಂತೆಯೇ ಬೌಂಡರಿ ಬಾರಿಸಿದ ವಾಷಿಂಗ್ಟನ್ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮೊದಲ ಗೆಲುವಿನ ಸವಿಯುಣಿಸಿದರು.

ಈ ಮೊದಲು ಟಾಸ್ ಗೆದ್ದು ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ಕೊಹ್ಲಿ ಆಯ್ಕೆ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಬೌಲ್ ಮಾಡಿದ ಉಮೇಶ್ ಯಾದವ್ ಓವರ್ ಒಂದರಲ್ಲಿ ಮೂರು ಪಡೆದು ಪಂಜಾಬ್ ಗೆ ಆಘಾತ ನೀಡಿದರು. ನಾಲ್ಕನೇ ಓವರ್ ಬೌಲ್ ಮಾಡಿದ ಯಾದವ್ ಪಂಜಾಬ್ ಓಪನರ್ ಮಯಾಂಕ್ ಅಗರವಾಲ್ (15), ಆರಾನ್ ಪಿಂಚ್ (0) ಹಾಗೂ ಯುವರಾಜ್ ಸಿಂಗ್(4) ವಿಕೆಟ್ ಪಡೆದರು.

ಕಳೆದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನಡೆಸಿದರು. 30 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿದ ರಾಹುಲ್ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ತಂಡದ ಆಸರೆಯಾದ ಕರುಣ್ ನಾಯರ್ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. 29 ರನ್ ಗಳಿಸಿದ ನಾಯರ್ 12ನೇ ಓವರ್ ಎಸೆದ ಕುಲವಂತ್ ಖೆಜ್ರೊಲಿಯಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಬಳಿಕ ಬಂದ ಮಾರ್ಕಸ್ ಸ್ಟಾಯ್ (11)ರನ್ನು ಕ್ವಿಂಟನ್ ಡಿ ಕಾಕ್ ಸ್ಟಂಪ್ ಗೆ ಬಲಿಯಾದರು. ಉಮೇಶ್ ಯಾದವ್ ಗೆ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದು ಪಂಜಾಬ್ ರನ್ ಓಟಕ್ಕೆ ಕಡಿವಾಣ ಹಾಕಿದರು. ನಂತರ ಬಂದ ಅಕ್ಷರ್ ಪಟೇಲ್ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ ಪಂಜಾಬ್ ನಾಯಕ ಆರ್ ಅಶ್ವಿನ್ ಬಿರುಸಿನ ಬ್ಯಾಟಿಂಗ್ ನಡೆಸಿ ಕೇವಲ 21 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 33 ರನ್ ಸಿಡಿಸಿ ತಂಡದ ಮೊತ್ತ 150 ರನ್ ಗಡಿ ದಾಟಲು ಕಾರಣರಾದರು. ಬಳಿಕ ಬಂದ ಆ್ಯಂಡ್ರ್ಯೂ ಟೈ (7), ರೆಹಮಾನ್ (0) ಔಟ್ ಆಗುವುದರೊಂದಿಗೆ ಇನ್ನು 4 ಬಾಲ್ ಇರುವಂತೆ ಪಂಜಾಬ್ ಆಲೌಟ್ ಆಯಿತು.

ಆರ್ ಸಿಬಿ ಪರ ಉಮೇಶ್ ಯಾದವ್ 3, ಖೆಜ್ರೊಲಿಯಾ, ಸುಂದರ್, ವೋಕ್ಸ್ ತಲಾ 2 ವಿಕೆಟ್ ಹಾಗೂ ಚಹಾಲ್ 1 ವಿಕೆಟ್ ಪಡೆದು ಮಿಂಚಿದರು. ಒಟ್ಟಾರೆ 19.2 ಓವರ್ ಗಳಲ್ಲಿ ಪಂಜಾಬ್ 155 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು.

Share This Article
Leave a Comment

Leave a Reply

Your email address will not be published. Required fields are marked *