ಕಾವೇರಿಗಾಗಿ ತಮಿಳುನಾಡು ಕ್ಯಾತೆ – ಚೆನ್ನೈಯಿಂದ ಐಪಿಎಲ್ ಪಂದ್ಯ ಶಿಫ್ಟ್?

Public TV
1 Min Read

ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನಿರ್ವಹಣಾ ಮಂಡಳಿ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೆನ್ನೈ ನಲ್ಲಿ ನಿಗದಿಯಾಗಿದ್ದ ಐಪಿಎಲ್ ಪಂದ್ಯಗಳನ್ನು ಬೇರೆಡೆ ಸ್ಥಳಾಂತರವಾಗುವ ಸಾಧ್ಯತೆಯಿದೆ.

ತಮಿಳುನಾಡಿನ ಸಾವಿರಾರು ಹೋರಾಟಗಾರರು ಎಂಎ ಚಿದಂಬರಂ ಕ್ರೀಡಾಂಗಣದ ಎದುರು ಮಂಗಳವಾರ ಹೋರಾಟ ನಡೆಸಿದ ಬೆನ್ನಲ್ಲೇ ಚರ್ಚೆ ನಡೆಸಲಾಗಿದೆ. ಶೀಘ್ರವೇ ಈ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಕ್ರೀಡಾಂಗಣದ ಬಳಿ ಸೇರಿದ್ದ ಸಾವಿರಾರು ಕಾರ್ಯಕರ್ತರು ಐಪಿಎಲ್ ಪಂದ್ಯಗಳನ್ನು ಬಹಿಷ್ಕರಿಸಬೇಕೆಂದು ಪ್ರತಿಭಟನೆ ನಡೆಸಿದರು. ತಮಿಳುನಾಡು ಚಿತ್ರ ರಂಗದ ಪ್ರಮುಖರು ಸಹ ಹೋರಾಟದಲ್ಲಿ ಭಾಗಿಯಾಗಿ ಐಪಿಎಲ್ ಪಂದ್ಯಗಳ ಬಹಿಷ್ಕರಕ್ಕಾಗಿ ಬೆಂಬಲ ನೀಡಿದ್ದರು. ಹೋರಾಟದ ವೇಳೆ ಪ್ರತಿಭಟನೆ ನಡೆಸುತ್ತಿದ್ದವರನ್ನು ತಡೆದ ಪೊಲೀಸರು ಅವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದರು.

ಚಪ್ಪಲಿ ಎಸೆತ: ಕೊಲ್ಕತ್ತಾ ಹಾಗೂ ಚೆನ್ನೈ ನಡುವಿನ ಪಂದ್ಯದ 8ನೇ ಓವರ್ ವೇಳೆ ಪ್ರೇಕ್ಷರ ಗ್ಯಾಲರಿಯಿಂದ ಮೈದಾನದಲ್ಲಿದ್ದ ಚೆನ್ನೈ ತಂಡದ ಆಟಗಾರ ರವೀಂದ್ರ ಜಡೇಜಾ ಅವರತ್ತ ಶೂ ಎಸೆದ ಘಟನೆಯೂ ನಡೆದಿತ್ತು. ಆದರೆ ಈ ಕೃತ್ಯವನ್ನು ತಮಿಳುನಾಡು ಟಿವಿಕೆ ಸಂಘಟನೆ ಮುಖಂಡರು ನಿರಾಕರಿಸಿದ್ದಾರೆ. ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಹೋರಾಟಗಾರರ ಪ್ರತಿಭಟನೆಯಿಂದ ನಿನ್ನೆ ನಡೆದ ಪಂದ್ಯದ ವೇಳೆ ನಗರದಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಹಲವು ಮುಖಂಡರು ಕಾವೇರಿಗಾಗಿ ಹೋರಾಟ ನಡೆಸುತ್ತಿರುವ ಸಮಯದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *