ಸಿಬಿಐನಿಂದ ಚಿದಂಬರಂ ಅರೆಸ್ಟ್ – ಅಮಿತ್ ಶಾ ವಿಡಿಯೋ ವೈರಲ್

Public TV
2 Min Read

ಬೆಂಗಳೂರು: ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಬಂಧನವಾಗುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ನನ್ನ ವಿರುದ್ಧ ದೂರು ದಾಖಲಾದಾಗ ನಾನು ಹೆದರಲಿಲ್ಲ. ನಾನು ನೇರವಾಗಿ ಸಿಬಿಐ ಕಚೇರಿಗೆ ಹೋಗಿದ್ದೆ. ತಪ್ಪು ಮಾಡದೇ ಇದ್ದರೆ ನಾನು ಯಾಕೆ ಹೆದರಬೇಕು? ನಾನು ಪಲಾಯನವಾದಿಯಲ್ಲ. ಮಾಧ್ಯಮಗಳಿಗೆ ಚಾರ್ಜ್ ಶೀಟ್ ಸಿಕ್ಕಿದೆ. ನನ್ನ ವಿರುದ್ಧ ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಾಗಿದೆ. ಚಾರ್ಜ್ ಶೀಟ್ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಬಳಿಕ ಕಾನೂನು ಹೋರಾಟ ಮಾಡುತ್ತೇನೆ. ನನಗೆ ನ್ಯಾಯಾಲಯದಲ್ಲಿ ವಿಶ್ವಾಸವಿದೆ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಲಾಗಿದೆ. ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ರಾಜಕೀಯವಾಗಿ ಯಾವ ಹೋರಾಟ ಮಾಡಬೇಕೋ ಆ ಹೋರಾಟವನ್ನು ರಾಜಕೀಯ ಅಂಗಳದಲ್ಲಿ ಮಾಡುತ್ತೇನೆ. ಈ ಪ್ರಕರಣದಲ್ಲಿ ಆರೋಪ ಮುಕ್ತವಾಗಿ ಬರುತ್ತೇನೆ ಎನ್ನುವ ವಿಶ್ವಾಸ ನನಗಿದೆ” ಎಂದು ಅಮಿತ್ ಶಾ ಈ ವಿಡಿಯೋದಲ್ಲಿ ಹೇಳಿದ್ದರು.

ಏನಿದು ಪ್ರಕರಣ?
ಸುಮಾರು 60 ಪ್ರಕರಣಗಳಲ್ಲಿ ಬೇಕಿದ್ದ ಕ್ರಿಮಿನಲ್ ಸೊಹ್ರಾಬುದ್ದೀನ್ ಶೇಖ್ ನನ್ನು 2005 ರಲ್ಲಿ ಗುಜರಾತ್ ಪೊಲೀಸರು ಎನ್ ಕೌಂಟರ್ ಮಾಡಿದ್ದರು. ಅಂದಿನ ಗೃಹಮಂತ್ರಿಯಾಗಿದ್ದ ಅಮಿತ್ ಶಾ ಆದೇಶ ಮೇರೆಗೆ ಈ ಎನ್‍ಕೌಂಟರ್ ಮಾಡಲಾಗಿದೆ. ಇದು ನಕಲಿ ಎನ್‍ಕೌಂಟರ್ ಎಂದು ಆರೋಪಿಸಿ ಈ ಪ್ರಕರಣವನ್ನು ಯುಪಿಎ ಸರ್ಕಾರ 2010ರ ಜನವರಿಯಲ್ಲಿ ಸಿಬಿಐಗೆ ವಹಿಸಲಾಗಿತ್ತು. ಈ ಸಂದರ್ಭದಲ್ಲಿ ಚಿದಂಬರಂ ಗೃಹ ಸಚಿವರಾಗಿದ್ದರು.

2010ರ ಜುಲೈ ನಲ್ಲಿ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಿತ್ತು. ಜಾಮೀನು ಅರ್ಜಿಗೆ ಸಿಬಿಐ ವಿರೋಧಿಸಿ 3 ತಿಂಗಳ ನಂತರ 2010ರ ಅಕ್ಟೋಬರ್ 29 ರಂದು ಅಮಿತ್ ಶಾ ಅವರಿಗೆ ಜಾಮೀನು ಮಂಜೂರಾಗಿತ್ತು. ಈ ಸಂದರ್ಭದಲ್ಲಿ 2 ವರ್ಷದ ವರೆಗೆ ಗುಜರಾತ್ ಪ್ರವೇಶಿಸದಂತೆ ಅಮಿತ್ ಶಾ ಅವರಿಗೆ ಕೋರ್ಟ್ ಷರತ್ತು ವಿಧಿಸಿತ್ತು. ಅಂದು ಬಂಧನಕ್ಕೊಳಗಾಗಿದ್ದ ಅಮಿತ್ ಶಾ ಚಿದಂಬರಂ ಹಾಗೂ ಕಾಂಗ್ರೆಸ್ ವಿರುದ್ಧ ರಾಜಕೀಯ ವಿರೋಧಿಗಳನ್ನು ಟಾರ್ಗೆಟ್ ಮಾಡಲು ಸಿಬಿಐ ಬಳಸಿಕೊಳ್ಳುತ್ತಿರುವ ಆರೋಪ ಮಾಡಿದ್ದರು. ಇಂದು ಕಾಂಗ್ರೆಸ್ ಈ ಆರೋಪವನ್ನು ಮೋದಿ ಸರ್ಕಾರದ ವಿರುದ್ಧ ಮಾಡುತ್ತಿದೆ.

ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಚಿದಂಬರಂ ನಾಪತ್ತೆಯಾಗಿದ್ದರು. ಸಿಬಿಐ ಅಧಿಕಾರಿಗಳು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ 2 ಗಂಟೆಯ ಒಳಗಡೆ ವಿಚಾರಣೆ ಹಾಜರಾಗಬೇಕು ಎಂದು ಸೂಚಿಸಿದ್ದರು. ಚಿದಂಬರಂ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಎಲ್ಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿರಲಿಲ್ಲ.

ಚಿದಂಬರಂ ನಾಪತ್ತೆಯಾದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ಪ್ರತ್ಯಾರೋಪ ಆರಂಭಗೊಂಡಿತ್ತು. ತಪ್ಪು ಮಾಡಿಲ್ಲ ಎಂದರೆ ಹೆದರಿ ಓಡಿ ಹೋಗುವುದು ಯಾಕೆ? ದೇಶ ಬಿಟ್ಟು ಪರಾರಿಯಾಗಿರುವ ಮಲ್ಯನಿಗೂ ಚಿದಂಬರಂ ಇಬ್ಬರು ಒಂದೇ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕಾಗಿ ವಿರೋಧಿಗಳ ಕೈಯನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದೆ. ಚಿದಂಬರಂ ವಿರುದ್ಧ ಮಾಡಿರುವ ಷಡ್ಯಂತ್ರ ಇದು ಎಂದು ಟೀಕಿಸುತ್ತಿದ್ದರು.

ಉದ್ಘಾಟಿಸಿದ ಕಟ್ಟಡವೇ ಲಾಕಪ್:
ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಬಿಐ ಕೇಂದ್ರ ಕಚೇರಿಯ ನೂತನ ಕಟ್ಟಡವನ್ನು 2011 ರಲ್ಲಿ ಗೃಹ ಮಂತ್ರಿಯಾಗಿದ್ದ ಚಿದಂಬರಂ ಉದ್ಘಾಟಿಸಿದ್ದರು. ಈಗ ಬಂಧನವಾಗಿರುವ ಚಿದಂಬರಂ ಅವರನ್ನು ಕಚೇರಿಯ ಲಾಕಪ್ ನಲ್ಲಿ ಇಡಲಾಗಿದೆ. ಕೆಳ ಅಂತಸ್ತಿನ ಸೂಟ್ ನಂಬರ್ 5ನೇ ಗೆಸ್ಟ್ ರೂಂನಲ್ಲಿ ಚಿದಂಬರಂ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *