ಬೃಹತ್ ಬೆಂಗ್ಳೂರು ಭೂ ಹಗರಣ ತನಿಖೆ ನಡೆಸಿ- ಎಚ್‍ಡಿಕೆಗೆ ಹಿರೇಮಠ ಸವಾಲ್

Public TV
1 Min Read

ಬೆಂಗಳೂರು: ಬೃಹತ್ ಕಂಪೆನಿಯಿಂದ ನಡೆದಿರುವ ಭೂ ಹಗರಣವೊಂದನ್ನು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಅವರು ಆಗ್ರಹಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಬಿಡಿ) ಬಿಪಿಎಲ್ ಕಂಪನಿ ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಭೂಮಿಯನ್ನು ಪಡೆದಿತ್ತು. ಈ ವೇಳೆ ರೈತರಿಗೆ ಪ್ರತಿ ಎಕರೆ ಭೂಮಿಗೆ ಕೇವಲ 1.10 ಲಕ್ಷ ರೂ. ನೀಡಲಾಗಿತ್ತು. ಆದರೆ ಈಗ ಅದೇ ಭೂಮಿಯನ್ನು ಪ್ರತಿ ಎಕರೆಗೆ 1.30 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ತನಿಖೆಗೆ ಆದೇಶ ನೀಡುವಿರಾ ಎಂದು ಸಿಎಂಗೆ ಸವಾಲು ಹಾಕಿದರು.

ಖರೀದಿಯಾದ ಜಮೀನು ಎಷ್ಟು?
ಕೆಐಎಡಿಬಿ ರೈತರಿಂದ 276 ಎಕರೆ ಭೂಮಿಯನ್ನು ಖರೀದಿ ಮಾಡಿತ್ತು. ಈ ಪೈಕಿ 175 ಎಕರೆ ಭೂಮಿಯನ್ನು ಬಿಪಿಎಲ್ ಕಂಪೆನಿಗೆ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಮಾರಾಟ ಮಾಡಲಾಗಿತ್ತು. ಆದರೆ ಬಿಪಿಎಲ್ ಕಂಪನಿಯು ಇತರೆ ಕಂಪೆನಿಗಳಿಗೆ 149 ಎಕರೆ ಭೂಮಿಯನ್ನು ಕೋಟ್ಯಂತರ ಹಣ ಪಡೆದು ಅಕ್ರಮವಾಗಿ ಮಾರಾಟ ಮಾಡಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಕೈಗಾರಿಕೆ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ ಎಂದು ಆರೋಪಿಸಿದರು.

ಸಿಎಂ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಈ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದರು. ಸದ್ಯ ಅವರೇ ಮುಖ್ಯಮಂತ್ರಿ ಆಗಿದ್ದು, ಹಗರಣದ ಕುರಿತು ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದ ಅವರು, ಬಿಪಿಎಲ್ ಕಂಪನಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಲೀಕರಾಗಿರುವ ಅನುಮಾನವನ್ನು ವ್ಯಕ್ತ ಪಡಿಸಿದರು.

Share This Article
1 Comment

Leave a Reply

Your email address will not be published. Required fields are marked *