ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಇನ್ವೆಸ್ಟ್ ಕರ್ನಾಟಕ

Public TV
3 Min Read

ಧಾರವಾಡ/ಹುಬ್ಬಳ್ಳಿ: ಬೆಂಗಳೂರು ಹೊರತುಪಡಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಫೆಬ್ರವರಿ 14 ರಂದು “ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ-2020” ಆಯೋಜಿಸಲಾಗಿದೆ. ಇನ್‍ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ವಿವರಣೆ ನೀಡಿದ್ರು.

ಹುಬ್ಬಳ್ಳಿ ನಗರದ ಡೆನಿಸ್ಸನ್ ಹೋಟೆಲ್‍ನಲ್ಲಿ ಆಯೋಜಿಸಿರುವ ಈ ಸಮಾವೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚಾಲನೆ ನೀಡಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ರೈಲ್ವೇ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಹುತೇಕರಿಗೆ ಕರ್ನಾಟಕವೆಂದರೆ ಬೆಂಗಳೂರು ಮಾತ್ರ ಎಂಬ ಕಲ್ಪನೆ ಇದೆ. ಕೈಗಾರಿಕಾ ಬೆಳವಣಿಗೆ ಕೇವಲ ಬೆಂಗಳೂರಿನಲ್ಲಿ ಆಗುತ್ತಿದ್ದು, 2 ಟಯರ್ ಮತ್ತು 3 ಟಯರ್ ಸಿಟಿಗಳಲ್ಲಿಯೂ ಕೈಗಾರಿಕೊದ್ಯಮದ ಬೆಳವಣಿಗೆ ಆಗಬೇಕೆಂಬ ಉದ್ದೇಶದಿಂದ ಈ ಭಾಗದಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜಿಸಿದ್ದೇವೆ. ಈ ಸಮಾವೇಶದಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯಪುರ, ಕಲುಬುರಗಿ, ಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೊದ್ಯಮ ಚಿಗುರೊಡೆಯಲಿದೆ.

ಈ ಸಮಾವೇಶಕ್ಕೆ 1000ಕ್ಕೂ ಹೆಚ್ಚು ಉದ್ಯಮಿಗಳ ಆಗಮನ ನಿರೀಕ್ಷಿಸಿದ್ದೇವೆ. ಹೈದರಾಬಾದ್, ಮುಂಬೈ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಉದ್ಯಮಿಗಳಿಗೆ ತಿಳಿಸಿದಾಗ ಅವರು ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಹಿಂದೂಜಾ ಹಾಗೂ ಟಾಟಾ ಗ್ರೂಪ್‍ನ ಮುಖ್ಯಸ್ಥರು ಈ ಸಮಾವೇಶಕ್ಕೆ ತಮ್ಮ ತಂಡ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈ ತಂಡಗಳು ಆಗಮಿಸಿ ಯಾವ ವಲಯದಲ್ಲಿ ಹೂಡಿಕೆ ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಸಲಿವೆ. ಜೊತೆಗೆ, ಚೀನಾ ಮೂಲದ ಕಂಪನಿಯ ಬೆಂಗಳೂರು ಪ್ರತಿನಿಧಿಗಳು ಸಹ ಈ ಸಮಾವೇಶಕ್ಕೆ ಆಗಮಿಸಿ, ವಿದ್ಯುತ್ಚಾಲಿತ ವಾಹನ ನಿರ್ಮಾಣದ ಕುರಿತು ಸಾಧಕ ಬಾಧಕದ ಬಗ್ಗೆಯೂ ವಿವರ ಕಲೆಹಾಕಲಿದ್ದಾರೆ ಎಂದರು.

ಹುಬ್ಬಳ್ಳಿ- ಧಾರವಾಡ ನಗರ ಹೂಡಿಕೆಗೆ ಸೂಕ್ತ ವಾತಾವರಣವನ್ನು ಹೊಂದಿದೆ. ಹುಬ್ಬಳ್ಳಿಯಲ್ಲಿ ಎಫ್‍ಎಂಸಿಜಿ ಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಗುವಾಹಟಿಗೆ ಭೇಟಿ ನೀಡಿ, ಗುವಾಹಟಿ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ (ಜಿಎಂಎ) ಮತ್ತು ಗ್ರಾಹಕ ಸರಕುಗಳ ಉತ್ಪಾದನಾ ಉದ್ಯಮಗಳಾದ (ಜ್ಯೋತಿ ಲ್ಯಾಬ್ಸ್, ಗೋದ್ರೇಜ್ ಮತ್ತು ಕ್ರಿಯೇಟಿವ್ ಪಾಲಿಪ್ಯಾಕ್) ಕರ್ನಾಟಕದಲ್ಲಿ ಹೂಡಿಕೆ ಮಾಡಲು ಸೆಳೆದಿದ್ದೇವೆ ಎಂದು ಹೇಳಿದರು.

ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 2500 ಎಕರೆ ಲ್ಯಾಂಡ್ ಬ್ಯಾಂಕ್ ಲಭ್ಯತೆ ಇದೆ. ಆ ಭಾಗದಲ್ಲಿ ಕೈಗಾರಿಕೆ ತೆರೆಯುವ ಆಸಕ್ತಿಯೂ ಕೆಲ ಕಂಪನಿಗಳಿಂದ ವ್ಯಕ್ತವಾಗಿವೆ. ಕೆಐಎಡಿಬಿಯು ಭೂ ಲಭ್ಯತೆ ಹೊಂದಿದ್ದು, ಕೆಲವೆಡೆ ಭೂ ಸ್ವಾಧೀನವನ್ನೂ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಆಸಕ್ತರನ್ನು ಸ್ಥಳ ಪರಿಶೀಲನೆಗೂ ಕರೆದೊಯ್ಯಲಾಗುತ್ತಿದೆ. ಮತ್ತೊಂದೆಡೆ ಮೂಲಸೌಕರ್ಯವಾದ ನೀರು ಹಾಗೂ ರಸ್ತೆ ಅಗಲೀಕರಣದಂತಹ ಕೆಲಸವೂ ಸಾಗಿವೆ ಎಂದು ವಿವರಣೆ ನೀಡಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಟೆಕ್ಸ್ ಟೈಲ್ಸ್, ವಾಲ್ಸ್, ಸೋಲಾರ್ ಪವರ್, ಫುಡ್‍ಫಾರ್ಕ್ ಸೇರಿದಂತೆ ಬಹುತೇಕ ವಲಯಗಳಲ್ಲಿ ಆಸಕ್ತಿ ವ್ಯಕ್ತವಾಗಿವೆ. ಇತ್ತೀಚೆಗೆ ಪತಂಜಲಿ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರೊಂದಿಗೂ ಫುಡ್‍ಪಾರ್ಕ್ ತೆರೆಯುವ ಸಂಬಂಧ ಚರ್ಚಿಸಿದ್ದೇವೆ. ಅವರ ತಂಡ ಹುಬ್ಬಳ್ಳಿಗೆ ಆಗಮಿಸಿ ಇಲ್ಲಿನ ಆಹಾರ ಪದಾರ್ಥಗಳ ಲಭ್ಯತೆ ಆಧಾರದ ಮೇಲೆ ಅಧ್ಯಯನ ನಡೆಸುವುದಾಗಿ ಹೇಳಿದೆ ಎಂದರು.

ಫೆಬ್ರವರಿ 14ರಂದು ಬೆಳಗ್ಗೆ 10 ರಿಂದ 12ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಯಾವ ರೀತಿಯ ಹೂಡಿಕೆಗೆ ಅವಕಾಶಗಳು ಇವೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನಂತರ ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ರಿಂದ ವಿವಿಧ ಉದ್ಯಮಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮವಿರಲಿದೆ ಎಂದು ವಿವರಣೆ ನೀಡಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಸಹ ಈ ಸಮಾವೇಶಕ್ಕೆ ಕೈ ಜೋಡಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೂ ಸಾಕಷ್ಟು ಸಹಕಾರ ವ್ಯಕ್ತವಾಗಿದೆ. ಈ ಸಮಾವೇಶ ನೆರವೇರಿಕೆಗೆ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹ ಒಟ್ಟಿಗೆ ನಿಂತು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ – ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್, ಡಿಸಿ ದೀಪಾ ಚೋಳನ್, ಶಾಸಕ ಅರವಿಂದ ಬೆಲ್ಲದ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *