ಜನವರಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ: ಸಚಿವ ಜಗದೀಶ್ ಶೆಟ್ಟರ್

Public TV
2 Min Read

ಹುಬ್ಬಳ್ಳಿ: ಉತ್ತರ ಕರ್ನಾಟಕದ ಉದ್ಯೋಗ, ಆರ್ಥಿಕತೆ ಬಲಪಡಿಸುವುದು ಹಾಗೂ ಬೆಂಗಳೂರು ಕೇಂದ್ರಿತವಾಗಿರುವ ಕೈಗಾರಿಕೆಗಳನ್ನು ರಾಜ್ಯದ ಎರಡನೇ ಹಂತದ ನಗರಗಳೆಡೆ ಸೆಳೆಯಲು ಜನವರಿಯಲ್ಲಿ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಆಯೋಜಿಸಲಾಗುತ್ತಿದೆ. ಹೊಸ ಕೈಗಾರಿಕಾ ನೀತಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಖಾಸಗಿ ಹೋಟೆಲ್ (ಡೆನಿಸನ್ಸ್) ಸಭಾಂಗಣದಲ್ಲಿ ಇಂದು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಏರ್ಪಡಿಸಿದ್ದ ಇನ್ವೆಸ್ಟ್ ಕರ್ನಾಟಕ -ಹುಬ್ಬಳ್ಳಿ ಸಮಾವೇಶದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶಗಳು, ಹಳೆಯ ಮೈಸೂರು, ಕರಾವಳಿ ಹಾಗೂ ಮಲೆನಾಡು ಭಾಗಗಳ ಎರಡನೇ ಹಂತದ ಪ್ರಮುಖ ನಗರಗಳನ್ನು ಕೈಗಾರಿಕೋದ್ಯಮಗಳ ನೆಲೆಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಕೈಗಾರಿಕೋದ್ಯಮಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಲಾಗಿದೆ. ಇದೇ ಡಿ.23 ರಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರೊಂದಿಗೆ ಮುಂಬಯಿ ನಗರದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದ್ದು, ಕೈಗಾರಿಕೋದ್ಯಮಿಗಳನ್ನು ಮುಖತಃ ಭೇಟಿಯಾಗಿ ಹೂಡಿಕೆದಾರರನ್ನು ಆಹ್ವಾನಿಸಲಿದ್ದೇವೆ ಎಂದರು.

ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೇಶದ ಸುಮಾರು 18 ಪ್ರಮುಖ ನಗರಳಿಗೆ ವಾಯು ಮಾರ್ಗದ ಸಂಪರ್ಕವಿದೆ. ಬಹುತೇಕ ಎಲ್ಲಾ ವಿಮಾನಗಳೂ ಶೇ.80-90 ರಷ್ಟು ಭರ್ತಿಯಾಗುತ್ತಿವೆ.ಬೆಳಗಾವಿ, ಕಲಬುರಗಿ ವಿಮಾನ ನಿಲ್ದಾಣಕ್ಕೂ ಈಗ ಸಂಪರ್ಕ ಸುಲಭವಾಗಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರ ಸಂಪರ್ಕಿಸುವ ಬಹುತೇಕ ಎಲ್ಲಾ ರಸ್ತೆಗಳು ಕೂಡ ರಾಷ್ಟ್ರೀಯ ಹೆದ್ದಾರಿಗಳಾಗಿವೆ. ಮುಂಬಯಿ- ಬೆಂಗಳೂರು ಮಾರ್ಗವನ್ನು ಕೇಂದ್ರ ಸರ್ಕಾರ ಈಗಾಗಲೇ ಕೈಗಾರಿಕಾ ಕಾರಿಡಾರ್ ಆಗಿ ಘೋಷಿಸಿರುವುದರಿಂದ, ಪೂನಾ- ಬೆಂಗಳೂರು ರಸ್ತೆಯನ್ನು ಅಷ್ಟಪಥ ರಸ್ತೆಯನ್ನಾಗಿಸಿ ಅಭಿವೃದ್ಧಿ ಪಡಿಸಲು ಕೇಂದ್ರ ಅನುದಾನ ನೀಡಲಿದೆ. ಈ ರಸ್ತೆಯನ್ನು ಎಕ್ಸ್‍ಪ್ರೆಸ್ ವೇ ಆಗಿ ಪರಿವರ್ತಿಸಲು ಕೋರಲಾಗಿದೆ ಎಂದರು.

ಕೈಗಾರಿಕಾ ಅಭಿವೃದ್ಧಿ ಪ್ರದೇಶಗಳಲ್ಲಿರುವ ಉದ್ಯಮಿಗಳಿಂದ ಆಕರಿಸುತ್ತಿರುವ ತೆರಿಗೆ ವಿಧಾನಗಳಲ್ಲಿ ಮಾರ್ಪಾಟುಗಳನ್ನು ತಂದು ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಜಿಲ್ಲೆಯ ಗಾಮನಗಟ್ಟಿ, ಇಟ್ಟಿಗಟ್ಟಿಯಲ್ಲಿ ಭೂ ಬ್ಯಾಂಕ್ ಗುರುತಿಸಿ ಉದ್ಯಮಿಗಳಿಗೆ ಭೂಮಿ ನೀಡಲಾಗುವುದು. ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡಲು ಸಿದ್ಧವಿದೆ. ಹೂಡಿಕೆದಾರರು ಮುಂದೆ ಬಂದು ಸಹಕಾರ ನೀಡಬೇಕು ಎಂದು ಹೇಳಿದರು.

ಶೀಘ್ರ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಸಂಪರ್ಕ:
ಉದ್ಯಮಿಗಳನ್ನು ಉತ್ತರ ಕರ್ನಾಟಕದ ಹುಬ್ಬಳ್ಳಿಯತ್ತ ಆಕರ್ಷಿಸಲು ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಆಯೋಜಿಸಲಾಗುತ್ತಿದೆ. ಈ ಹಿಂದೆ ಕೃಷಿ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಶೇ.60-70 ರಷ್ಟು ಕೊಡುಗೆಯಿತ್ತು. ಈಗ ಅದು ಶೇ.14 ಕ್ಕೆ ಇಳಿದಿದೆ. ಕೈಗಾರಿಕೆ ಚಟುವಟಿಕೆಗಳಿಂದ ಇದನ್ನು ಸರಿದೂಗಿಸಬೇಕಾಗಿದೆ. ಶೀಘ್ರವೇ ಹುಬ್ಬಳ್ಳಿಯಿಂದ ದೆಹಲಿ ಮತ್ತು ಹೈದರಾಬಾದ್ ನಗರಗಳಿಗೂ ವಿಮಾನ ಸಂಪರ್ಕ ಪ್ರಾರಂಭವಾಗಲಿದೆ.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರತಿದಿನ ನಸುಕಿನ ವೇಳೆ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ತಡಸಂಜೆ ವಿಮಾನ ಸಂಪರ್ಕ ಆರಂಭವಾಗಲಿದೆ. ಕೈಗಾರಿಕೋದ್ಯಮಿಗಳು ಮುಕ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕೈಗಾರಿಕೆಗಳಿಗೆ ಉತ್ತೇಜನ ನೀಡಿ,ಅಭಿವೃದ್ಧಿ ತರಲು ಬದ್ಧವಾಗಿವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *