‘ಕೆಜಿಎಫ್’ ನಲ್ಲಿ ರಾಕಿ ತಾಯಿ ಅರ್ಚನಾ ಮಾತು

Public TV
2 Min Read

ಬೆಂಗಳೂರು: ಒಂದು ಸಣ್ಣಪಾತ್ರ ಹೊಸ ಜೀವನಕ್ಕೆ ನಾಂದಿಯಾಗುತ್ತೆ ಎಂಬುದಕ್ಕೆ ಕೆಜಿಎಫ್ ಸಿನಿಮಾದಲ್ಲಿ ನಟ ಯಶ್ ಅವರಿಗೆ ತಾಯಿ ಪಾತ್ರದಲ್ಲಿ ಅಭಿನಯಿಸಿರುವ ಅರ್ಚನಾ ಜೋಯಿಸ್ ಅವರೇ ತಾಜಾ ಉದಾಹರಣೆಯಾಗಿದ್ದಾರೆ.

ಬೆಳ್ಳಿಪರದೆ ಮೇಲೆ ಪಾತ್ರಗಳು ಬರುವುದು ಕೆಲವು ನಿಮಿಷಗಳಾದರೂ, ಅವರು ಹೇಳುವ ಮಾತುಗಳಿಂದ ಜನಮನದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತದೆ. ಈಗ ‘ಕೆಜಿಎಫ್’ ಸಿನಿಮಾದ ಮೇಜರ್ ಹೈಲೈಟ್‍ಗಳಲ್ಲಿ ತಾಯಿ ಪಾತ್ರ ಕೂಡ ಒಂದಾಗಿದೆ. ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ತಾಯಿ ಪಾತ್ರ ಮಾಡಿರುವುದು ಅರ್ಚನಾ ಜೋಯಿಸ್. ಇವರು ಕಿರುತೆರೆಯ ಪ್ರತಿಭೆಯಾಗಿದ್ದು, ಸೀರಿಯಲ್‍ ಗಳಲ್ಲಿ ಅಭಿನಯಿಸಿಕೊಂಡು ಭರತನಾಟ್ಯದಲ್ಲಿ ಬ್ಯುಸಿಯಾಗಿದ್ದರು.

ಯಾವುದೂ ಅಸಾಧ್ಯವಲ್ಲ ಅನ್ನೋದಕ್ಕೆ ರಾಕಿಭಾಯ್ ತಾಯಿ ಲುಕ್‍ ನಲ್ಲಿ ಕಾಣಿಸಿಕೊಂಡಿರುವ ಅರ್ಚನಾ ಸಾಕ್ಷಿಯಾಗಿದ್ದರು. ಸೀರಿಯಲ್‍ಗಳಲ್ಲಿ ಕಾಣಿಸಿಕೊಂಡು, ಭರತನಾಟ್ಯ ಮಾಡಿಕೊಂಡಿದ್ದ ಅರ್ಚನಾ ಇಂದು ನ್ಯಾಷನಲ್ ಲೆವೆಲ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಬೇರೆ ಚಿತ್ರರಂಗದ ನಿರ್ದೇಶಕರು, ಟೆಕ್ನೀಷಿಯನ್‍ ಗಳು ಇವರಿಗೆ ಮೆಸೇಜ್ ಮಾಡಿ ಶುಭಾಶಯ ಮಾಡುತ್ತಿದ್ದಾರೆ. ಎಲೆಮರೆ ಕಾಯಿಯಂತಿದ್ದ ಅರ್ಚನಾರನ್ನು ಇಂದು 5 ಭಾಷೆ ಜನ ಗುರುತಿಸುತ್ತಿದ್ದಾರೆ.

ಪಬ್ಲಿಕ್  ಟಿವಿ ಜೊತೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತೆ ಫೋನ್ ಮಾಡಿ ಯಶ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಆಗ ತುಂಬಾ ಸಂತಸ ಪಟ್ಟೆ. ಆದರೆ ಅವರ ತಾಯಿ ಪಾತ್ರದಲ್ಲಿ ಅಭಿನಯಿಸಬೇಕು ಎಂದಾಗ ನಾನು ಇಷ್ಟು ಚಿಕ್ಕವಯಸ್ಸಿಗೆ ತಾಯಿ ಪಾತ್ರ ಮಾಡೋದಾ ಬೇಡವಾ ಅನ್ನೋ ಡೌಟ್ ಇತ್ತು. ಕೊನೆಗೆ ಮನೆಯವರ ಜೊತೆ ಮಾತನಾಡಿ ಒಪ್ಪಿಕೊಂಡೆ. ಆಗ ನಿರ್ದೇಶಕ ಪ್ರಶಾಂತ್ ನೀಲ್ ಪಾತ್ರದ ಬಗ್ಗೆ ವಿವರಿಸಿ ಪಾತ್ರ ಮಾಡುವಂತೆ ಒತ್ತಾಯಿಸಿದರು ಎಂದು ಹೇಳಿದ್ದಾರೆ.

ಮೇಕಪ್ ಆದ ಮೇಲೆ ನಾನು ತುಂಬಾ ವಿಭಿನ್ನವಾಗಿ ಕಾಣಿಸುತ್ತಿದ್ದೆ. ನನ್ನ ಫಸ್ಟ್ ಸೀನ್ ಗರ್ಭಿಣಿ ಪಾತ್ರ ಮೊದಲು ಮುಜುಗರವಾಗಿತ್ತು. ನಾನು ಕೆಜಿಎಫ್ ಜರ್ನಿಯಲ್ಲಿ ಕೆಲಸ ಮಾಡಿರುವುದು 10 ದಿನ ಮಾತ್ರ. ನಾನು ತೆರೆಮೇಲೆ ಬರುವುದು 4 ರಿಂದ 5 ನಿಮಿಷ ಮಾತ್ರವಾಗಿದ್ದು, ಆದರೆ ಈ ಪಾತ್ರದ ಖದರ್ ಹೇಗಿದೆ ಅಂದರೆ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಗಡೆ ಬಂದ ಮೇಲೂ ಆ ಡೈಲಾಗ್ ಕಿವಿಯಲ್ಲಿ ಮೊಳಗುತ್ತಿರುತ್ತದೆ. ಮನದಲ್ಲಿ ಮನೆ ಮಾಡಿ ನೆಲೆಸಿರುತ್ತದೆ ಎಂದು ಕೆಜಿಎಫ್ ಅನುಭವವನ್ನು ಅರ್ಚನಾ ಮೆಲುಕು ಹಾಕಿದ್ದಾರೆ.

ಟ್ರೇಲರ್ ಬಂದ ಮೇಲೆ ನನಗೆ ಎಲ್ಲರೂ ಗೌರವ ಕೊಡುತ್ತಿದ್ದಾರೆ. ನನಗೆ ಈಗ ಜವಾಬ್ದಾರಿ ಹೆಚ್ಚಾಗಿದೆ. ಬೇರೆ ರಾಷ್ಟ್ರದಿಂದ ಮೆಸೇಜ್ ಮಾಡಿ ಶುಭಾಶಯವನ್ನು ತಿಳಿಸುತ್ತಿದ್ದಾರೆ ಎಂದು ಅರ್ಚನಾ ಹೇಳಿದ್ದಾರೆ. ಒಟ್ಟಿನಲ್ಲಿ ‘ಕೆಜಿಎಫ್’ ಅರ್ಚನಾಗೆ ಒಂದು ಗಟ್ಟಿನೆಲೆಯನ್ನ ಕಟ್ಟಿಕೊಟ್ಟಿದೆ. ಯಾವ ಪಾತ್ರವೂ ಚಿಕ್ಕದಲ್ಲ, ಯಾವೂದು ಅಸಾಧ್ಯವಲ್ಲ ಅನ್ನೋದನ್ನ ಮತ್ತೊಮ್ಮೆ ‘ಕೆಜಿಎಫ್’ ಸಾಬೀತು ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *