ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕರೆನ್ಸಿ (UAE Currency) ದಿರ್ಹಮ್ ತೋರಿಸಿ ಲಕ್ಷ ಲಕ್ಷ ಹಣ ದೋಚುತ್ತಿದ್ದ ಅಂತರರಾಜ್ಯ ವಂಚಕರನ್ನ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು (Doddaballapur Rural Police) ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಎ2 ಆರೋಪಿ ಶೇಖ್ ಸಲ್ಮಾ ಬಾನು (35), ಎ3 ಆರೋಪಿ ಮೊಹಮ್ಮದ್ ಮಿಲ್ಲನ್ (32) ಬಂಧಿತರಾಗಿದ್ದು, ಎ1 ಆರೋಪಿ ತಲೆ ಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.
ಚಿಕ್ಕಬಳ್ಳಾಪುರ (Chikkaballapura) ಮೂಲದ ಟೂರ್ಸ್ ಅಂಡ್ ಟ್ರಾವೆಲ್ಸ್ ವ್ಯವಹಾರ ಮಾಡುತ್ತಿದ್ದ ಅಲ್ಲಾಬಕಾಶ್ ಎಂಬ ವ್ಯಕ್ತಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ದಿರ್ಹಮ್(ಹಣ) ತೋರಿಸಿ 6 ಲಕ್ಷ ಪೀಕಿ ಮೋಸ ಮಾಡಲಾಗಿದೆ. ಇಬ್ಬರು ಖತರ್ನಾಕ್‌ಗಳು 100 ದಿರ್ಹಮ್‌ನ ನೋಟನ್ನು ತೋರಿಸಿ ಈ ರೀತಿಯ ದಿರ್ಹಮ್ ತನ್ನ ಬಳಿ ಹೆಚ್ಚಿಗೆ ಇದ್ದು ಇನ್ನು ಕಡಿಮೆ ಬೆಲೆಗೆ ಕೊಡುತ್ತೇನೆ ಎಂದಿದ್ದಾರೆ. ದೂರುದಾರನನ್ನು ಆಗಸ್ಟ್ 23 ರಂದು ಚಿಕ್ಕಬಳ್ಳಾಪುರದಿಂದ ದೊಡ್ಡಬಳ್ಳಾಪುರದ ಬಾಶೆಟ್ಟಹಳ್ಳಿಗೆ ಕರೆಸಿಕೊಂಡಿದ್ದಾರೆ. ಅಲ್ಲಿ ಅವನಿಗೆ ದಿರ್ಹಮ್ ಕರೆನ್ಸಿ ತೋರಿಸಿ ಆಸೆ ಹುಟ್ಟಿಸಿ ಬಲವಾಗಿ ನಂಬಿಸಿದ್ದಾರೆ.
ಮರುದಿನ ಆಗಸ್ಟ್ 24ರಂದು ಬೆಳಗ್ಗೆ 8:00 ಗಂಟೆಗೆ ಮತ್ತೆ ದೂರುದಾರನು 6 ಲಕ್ಷ ಹಣವನ್ನು ತೆಗೆದುಕೊಂಡು ಬಂದು ಆರೋಪಿಗಳಿಗೆ ನೀಡಿದ್ದಾನೆ. ದೂರುದಾರನಿಂದ ಭಾರತ ಕರೆನ್ಸಿಯಲ್ಲಿ 6 ಲಕ್ಷ ಹಣ ಪಡೆದ ಆರೋಪಿಗಳು, ಯುನೈಟೆಡ್ ಅರಬ್ ಎಮಿರೇಟ್ಸ್ ನ ದಿರ್ಹಮ್(ಹಣ) ಇದ್ದ ಬ್ಯಾಗನ್ನು ದೂರುದಾರನಿಗೆ ಕೊಟ್ಟು ಎಸ್ಕೇಪ್ ಆಗಿದ್ದಾರೆ.
ಆರೋಪಿಗಳು ನೀಡಿದ್ದ ಬ್ಯಾಗನ್ನು ಪಡೆದುಕೊಂಡು ಬಂದು ಪರಿಶೀಲಿಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಬ್ಯಾಗ್ ನಲ್ಲಿ ದಿರಮ್ಸ್ ಬದಲಿಗೆ ಬಿಳಿಯ ಪೇಪರ್‌ಗಳು ಕಂಡುಬಂದಿದೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಣ ಕಳೆದುಕೊಂಡ ಅಲ್ಲಾಬಕಾಶ್ ದೂರು ದಾಖಲಿಸಿದ್ದಾನೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇನ್ಸ್‌ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚಂದ್ರಕಲಾ, ಎಎಸ್‌ಐ ಸುನಿಲ್ ಬಾಸಗಿ ಇತರೇ ಸಿಬ್ಬಂದಿ ಫೈರೋಜ್ ಕೆ, ಪ್ರವೀಣ್, ಸಚಿನ್ ಉಪ್ಪಾರ್ ಅವರ ತಂಡವು, ಆರೋಪಿಗಳ ಜಾಡು ಪತ್ತೆ ಮಾಡಿ ಇಬ್ಬರನ್ನ ಬಂಧಿಸಿದೆ. ಸದ್ಯ ಎ1 ಆರೋಪಿ ತಲೆಮರೆಸಿಕೊಂಡಿದ್ದು, ಎ1 ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.