ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಕಲ್ಲು ತೂರಾಟ – ಇಂಟರ್ನೆಟ್ ಸ್ಥಗಿತ, 36 ಗಂಟೆಗಳ ಕಾಲ ಕರ್ಫ್ಯೂ

Public TV
1 Min Read

ಭುವನೇಶ್ವರ: ಒಡಿಶಾದ ಕಟಕ್ ನಗರದಲ್ಲಿ ದುರ್ಗಾ ವಿಗ್ರಹ (Durga Puja idol) ವಿಸರ್ಜನೆ ವೇಳೆ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಸಂಭವಿಸಿದ ಒಂದು ದಿನದ ನಂತರ ಅಂದ್ರೆ ಭಾನುವಾರ (ಅ.5) ಉದ್ವಿಗ್ನತೆ ತಾರಕಕ್ಕೇರಿದೆ.

ಉದ್ವಿಗ್ನತೆ ಹೆಚ್ಚಾಗ್ತಿದ್ದಂತೆ ಒಡಿಶಾ ಸರ್ಕಾರವು ಕಟಕ್‌ನ (Cuttack) ಹಲವು ಭಾಗಗಳಲ್ಲಿ ಇಂಟರ್ನೆಟ್ (Internet Banned) ಹಾಗೂ ಸೋಶಿಯಲ್‌ ಮೀಡಿಯಾಗಳನ್ನ ಸ್ಥಗಿತಗೊಳಿಸಿದೆ. ಸಾರ್ವಜನಿಕ ವಲಯದಲ್ಲಿ ಶಾಂತಿ ಕಾಪಾಡಲು ಮತ್ತು ಪ್ರಚೋದನಕಾರಿ ಸಂದೇಶಗಳ ಹರಡುವಿಕೆ ತಡೆಯಲು 36 ಗಂಟೆಗಳ ಕರ್ಫ್ಯೂ (Curfew) ವಿಧಿಸಿರುವುದಾಗಿ ಗೃಹ ಇಲಾಖೆ ತಿಳಿಸಿದೆ.

ಹಿಂಸಾಚಾರ ಸಂಭವಿಸಿದ್ದು ಹೇಗೆ?
ಪೊಲೀಸರ ಪ್ರಕಾರ, ಶನಿವಾರ ಬೆಳಗಿನ ಜಾವ 1:30 ರಿಂದ 2 ಗಂಟೆಯ ನಡುವೆ ಹಿಂಸಾಚಾರ ಸಂಭವಿಸಿದೆ. ತಡರಾತ್ರಿಯಲ್ಲಿ ದರ್ಗಾ ಬಜಾರ್ ಪ್ರದೇಶದ ಮೂಲಕ ಕಥಜೋಡಿ ನದಿಯ ದಡದ ಕಡೆಗೆ ಹಾದುಹೋಗುವ ದುರ್ಗಾ ವಿಗ್ರಹ ವಿಸರ್ಜನಾ ಮೆರವಣಿಗೆಯನ್ನ ಸ್ಥಳೀಯರ ಗುಂಪೊಂದು ತಡೆದಿದೆ. ಈ ವೇಳೆ ವಾಗ್ವಾದ ತೀವ್ರಗೊಂಡು ಹಿಂಸಾಚಾರಕ್ಕೆ ತಿರುಗಿತು. ಜನಸಮೂಹವು ಮನೆಗಳ ಮೇಲಿಂದ ಕಲ್ಲುಗಳು, ಗಾಜಿನ ಬಾಟಲಿಗಳನ್ನು ಎಸೆದಿದ್ದು ಉದ್ವಿಗ್ನಕ್ಕೆ ಕಾರಣವಾಯ್ತು. ಈ ವೇಳೆ ಕಟಕ್ ಡಿಸಿಪಿ ರಿಷಿಕೇಶ್ ಜ್ಞಾನದೇವ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಈ ಘಟನೆಯಲ್ಲಿ ವಾಹನಗಳು ಮತ್ತು ರಸ್ತೆ ಬದಿಯ ಅಂಗಡಿಗಳಿಗೆ ಹಾನಿಯಾಗಿದೆ.

ಕಟಕ್‌ನ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನ ನಿಯೋಜಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ.

Share This Article