ಬಣ ಬಡಿದಾಟ ಜೋರು – ಯತ್ನಾಳ್‌ ಟೀಂ ವಿರುದ್ಧವೇ ಬಿಜೆಪಿಯಿಂದ ಪೊಲೀಸ್‌ ದೂರು

Public TV
2 Min Read

– ವಕ್ಫ್‌ ಹೋರಾಟ ಬಣ ಸಂಘರ್ಷಕ್ಕೆ ಬಲಿಯಾಗುತ್ತಾ?

ಬೆಂಗಳೂರು/ ಬೀದರ್:‌ ರಾಜ್ಯ ಬಿಜೆಪಿ‌ ಮನೆಯ ಬಿರುಕು ಮತ್ತಷ್ಟು ಹೆಚ್ಚಾಗಿದ್ದು, ಬಣ ಬಡಿದಾಟ ಮತ್ತೊಂದು ಹಂತಕ್ಕೆ ಹೋಗಿದೆ. ಇಂದಿನಿಂದ ವಕ್ಫ್ ವಿರೋಧಿ ರಾಜ್ಯ ಪ್ರವಾಸ ಕೈಗೊಂಡಿರುವ ಶಾಸನ ಬಸನಗೌಡ ಪಾಟೀಲ್‌ ಯತ್ನಾಳ್ (Basangouda Patil Yatnal) ತಂಡಕ್ಕೆ ಬಿಜೆಪಿಯಿಂದ ಪೊಲೀಸ್ ದೂರು ನೀಡುವ ಮೂಲಕ ಶಾಕ್ ಕೊಡಲಾಗಿದೆ. ಪಕ್ಷದಿಂದಲೂ ಯತ್ನಾಳ್ ತಂಡ ವಿರುದ್ಧ ಹೈಕಮಾಂಡ್ ಗೆ ದೂರು‌ ಕೊಡಲು ನಿರ್ಧರಿಸಲಾಗಿದೆ. ಬಿಜೆಪಿ ವಕ್ಫ್ ಹೋರಾಟ (Waqf Protests) ಬಣ ಸಂಘರ್ಷಕ್ಕೆ ಬಲಿಯಾಗುವ ಲಕ್ಷಣ ಕಾಣುತ್ತಿದೆ.

ಒಡೆದ ಮನೆಯಾಗಿರುವ ಬಿಜೆಪಿಯಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ವಕ್ಫ್ ಹೋರಾಟದಲ್ಲಿ ಬಿಜೆಪಿಯ ಎರಡು ಬಣಗಳ ಆಂತರಿಕ ಕಚ್ಚಾಟ ಬೀದಿಗೆ ಬಂದಿದೆ. ವಕ್ಫ್‌ ಭೂಕಬಳಿಕೆ ವಿರೋಧಿಸಿ ಇಂದಿನಿಂದ ಬೀದರ್‌ನಿಂದ ಪ್ರವಾಸ ಹೊರಟ ಯತ್ನಾಳ್/ ರಮೇಶ್‌ ಜಾರಕಿಹೊಳಿ ತಂಡಕ್ಕೆ ವಿಜಯೇಂದ್ರ ತಂಡ  ಠಕ್ಕರ್ ಕೊಟ್ಟಿದೆ.

ಬಿಜೆಪಿ (BJP) ಚಿಹ್ನೆಯಡಿ ವಕ್ಫ್ ಹೋರಾಟ ಮಾಡುತ್ತಿರುವ ಯತ್ನಾಳ್ ಅಂಡ್ ಟೀಂ ಮೇಲೆ ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಪೊಲೀಸ್ ಅಧೀಕ್ಷಕರಿಗೆ ಲಿಖಿತ ದೂರು ನೀಡಿದ್ದಾರೆ. ಯಾರೋ ಅನಾಮಿಕರು ಬೀದರ್ ನಗರಾದ್ಯಂತ ಬಿಜೆಪಿ ಚಿಹ್ನೆ ಬ್ಯಾನರ್‌ಗಳನ್ನು ಹಾಕಿದ್ದಾರೆ. ಜಿಲ್ಲಾಧ್ಯಕ್ಷನಾದ ನನಗೆ ಯಾವುದೇ ಮಾಹಿತಿ ನೀಡದೇ ಬಿಜೆಪಿ ಚಿಹ್ನೆ ಬಳಿಸಿಕೊಂಡಿದ್ದಾರೆ.‌ ನಗರದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಹಾಕಲು ನಗರ ಸಭೆಯಿಂದ ಅನುಮತಿ ನೀಡದೇ ಇದ್ದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಇತ್ತ ಯತ್ನಾಳ್ ವಿರುದ್ಧದ ಪೊಲೀಸ್ ದೂರನ್ನು ಪಕ್ಷವೂ ಸಮರ್ಥಿಸಿಕೊಂಡಿದೆ. ಜತೆಗೆ ಯತ್ನಾಳ್ ಅಂಡ್ ಟೀಮ್ ವಿರುದ್ಧ ಬಿಜೆಪಿ ಪಕ್ಷದಿಂದಲೂ ಕ್ರಮಕ್ಕೆ ಕೋರಿ ರಾಷ್ಟ್ರೀಯ ಬಿಜೆಪಿಗೆ ದೂರು ಕೊಡಲು ನಿರ್ಧರಿಸಲಾಗಿದೆ. ಈ ಸಂಬಂಧ ಇಂದು ಮಾತಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್, ಯತ್ನಾಳ್ ತಂಡದ ವಕ್ಫ್‌ ಹೋರಾಟಕ್ಕೆ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಬಿಜೆಪಿಗೆ ಸಂಬಂಧವಿಲ್ಲ. ಇದು ಪಕ್ಷ ವಿರೋಧಿ ನಡೆ, ಪಕ್ಷದ ಶಿಸ್ತು ಉಲ್ಲಂಘನೆ. ಬೀದರ್‌ನಲ್ಲಿ ದೂರು ದಾಖಲಾಗಿರುವುದು ಸರಿಯಿದೆ. ರಾಷ್ಟ್ರೀಯ ಬಿಜೆಪಿಗೂ ಯತ್ನಾಳ್ ತಂಡದ ವಿರುದ್ಧ ವರದಿ ಕಳಿಸಲಾಗುತ್ತದೆ ಎಂದರು. ಇದನ್ನೂ ಓದಿ: ನಾವು ಯಾರಿಗೂ ಎಚ್ಚರಿಕೆ ಕೊಡದೇ ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ – ಅರವಿಂದ ಲಿಂಬಾವಳಿ

ಬಿಜೆಪಿ ಚಿಹ್ನೆಯಡಿಯಲ್ಲಿ ಯತ್ನಾಳ್ ಟೀಂ ಜನಜಾಗೃತಿ ಹೋರಾಟದ ಬ್ಯಾನರ್ ನಲ್ಲೇ ರಾಜ್ಯ ನಾಯಕರ ಪೋಟೋಗೆ ಕೊಕ್ ಕೊಡಲಾಗಿದೆ. ಕೇಂದ್ರ ನಾಯಕರ ಪೋಟೋ ಬಳಿಸಿಕೊಂಡು ಬೀದರ್‌ನಿಂದ ಹೋರಾಟದ ಅಖಾಡಕ್ಕೆ ಯತ್ನಾಳ್ ತಂಡ ಎಂಟ್ರಿಯಾಗಿದೆ. ಯತ್ನಾಳ್ ತಂಡದ ಈ ವಕ್ಫ್ ಹೋರಾಟಕ್ಕೆ ಬೀದರ್‌ನ ವಿಜಯೇಂದ್ರ (BY Vijayendra) ತಂಡದ ನಾಲ್ವರು ಬಿಜೆಪಿ ಶಾಸಕರು ಗೈರಾಗುವ ಮೂಲಕ ಟಕ್ಕರ್‌ ಕೊಟ್ಟಿದ್ದಾರೆ.

ಯತ್ನಾಳ್ ತಂಡದ ವಕ್ಫ್ ಹೋರಾಟ ಯಡಿಯೂರಪ್ಪ, ಬೊಮ್ಮಾಯಿ ವಿರುದ್ಧ ಅಂತ ಗೃಹ ಸಚಿವ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ. ಅವರಿಬ್ಬರ ಕಾಲದಲ್ಲಿ ವಕ್ಫ್ ನೋಟಿಸ್‌ ಹೆಚ್ಚಾಗಿ ಕೊಟ್ಟಿದ್ದರು. ಅದನ್ನು ಬಹಿರಂಗ ಮಾಡಲು ಯತ್ನಾಳ್ ತಂಡ ಹೋರಾಟ ಮಾಡುತ್ತಿದೆ ಎಂದು ಪರಮೇಶ್ವರ್ ಠಕ್ಕರ್ ನೀಡಿದರು.

ಒಟ್ಟಿನಲ್ಲಿ ಸದ್ಯಕ್ಕೆ ಬಿಜೆಪಿ ಒಡೆದ ಮನೆಯಾಗಿದ್ದು ಹೈಕಮಾಂಡ್ ಮಧ್ಯಪ್ರವೇಶ ಮಾಡಿ ರಿಪೇರಿ ಮಾಡದೇ ಇದ್ದರೆ ಈ ಬಣ ಸಂಘರ್ಷ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

 

Share This Article