ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra) ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ. ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ಷಡ್ಯಂತ್ರ ಇದೆ ಎಂದು ಅವರೇ ಹೇಳಿಕೆ ಕೊಟ್ಟಿದ್ದಾರೆ. ಸಂದರ್ಭ ಬಂದಾಗ ಉತ್ತರ ನೀಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಸಿಎಂ ಕೊಲೆ ಮಾಡಿಸಿ ರಾಜಕಾರಣ ಮಾಡಿದ್ದಾರೆ ಅಂದ್ರೆ ನಾನು ನಂಬಲ್ಲ: ಸಿ.ಟಿ ರವಿ
ಇನ್ನೂ ಯಾವಾಗ ಸಮಯ ಬರಲಿದೆ? ರಾಜ್ಯದ ಜನರು- ಕೋಟಿ, ಕೋಟಿ ಭಕ್ತಾದಿಗಳು ಇವತ್ತು ಆತಂಕದಲ್ಲಿದ್ದಾರೆ. ಧರ್ಮಸ್ಥಳದಲ್ಲಿ ಯಾವ ರೀತಿ ತನಿಖೆ ನಡೆಯುತ್ತಿದೆ. ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೆಲ್ಲ ವಿಷಯದಲ್ಲಿ ಜನರು ನಿದ್ದೆ ಮಾಡದಂಥ ಸ್ಥಿತಿ ಇದೆ. ಇನ್ನೂ ಕೂಡ ಡಿ.ಕೆ.ಶಿವಕುಮಾರ್ (D.K Shivakumar) ಅವರಿಗೆ ಸಮಯ ಬಂದಿಲ್ಲ ಎಂದು ಕಾಣುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಮ್ಮ ಪಕ್ಷದ ಸಂಸದರು, ಎಲ್ಲಾ ಹಿರಿಯ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆಗೂಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಶ್ರೀ ಮಂಜುನಾಥೇಶ್ವರನ ದರ್ಶನ ಪಡೆದುಕೊಂಡಿದ್ದೇವೆ. ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿ ಮಾಡಿದ್ದೇವೆ ಎಂದಿದ್ದಾರೆ.
ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಆ ಅಪಪ್ರಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾಕೆ ಎಚ್ಚತ್ತುಕೊಂಡಿಲ್ಲ? ಅಪಪ್ರಚಾರಕ್ಕೆ ಕಡಿವಾಣ ಹಾಕುವ ಇಚ್ಛೆ ಸರ್ಕಾರಕ್ಕೆ ಇರಲಿಲ್ಲವೇ? ಯಾವ ಕಾರಣಕ್ಕೆ ಇದು ಆಗಿಲ್ಲ ಎಂಬ ಕುರಿತು ಗೃಹ ಸಚಿವರು ಇವತ್ತು ತಮ್ಮ ಉತ್ತರದಲ್ಲಿ ತಿಳಿಸಬೇಕು. ಸದನದಲ್ಲಿ ಏನು ಉತ್ತರ ನೀಡುತ್ತಾರೆ ಎಂದು ನೋಡುತ್ತೇವೆ ಎಂದಿದ್ದಾರೆ.
ರಾಜ್ಯ ಸರ್ಕಾರ ತುಮಕೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪದೇಪದೇ ಎಫ್‍ಐಆರ್ ದಾಖಲಿಸುತ್ತಿದೆ. ಮೈಸೂರಿನಲ್ಲೂ ಪೋಸ್ಟ್ ವಿರುದ್ಧ ಕಾರ್ಯಕರ್ತನ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಿದೆ. ಸರ್ಕಾರ ಹಿಂದೂ ಕಾರ್ಯಕರ್ತರ ಬಗ್ಗೆ ತೋರುವ ಆಸಕ್ತಿಯನ್ನು ಧರ್ಮಸ್ಥಳದ ವಿಷಯದಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ತೋರಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಧರ್ಮಾಧಿಕಾರಿಗಳ ವಿರುದ್ಧ ಯಾರೂ ಇಲ್ಲ: ರಾಮಲಿಂಗಾರೆಡ್ಡಿ