ಕಲಬುರಗಿ: ನಗರದ (Kalaburagi) ಹೃದಯ ಭಾಗದಲ್ಲಿರುವ ಸೂಪರ್ ಮಾರ್ಕೆಟ್‌ನ ಸರಾಫ್ ಬಜಾರ್‌ನಲ್ಲಿ ಚಿನ್ನದ ಅಂಗಡಿ ( Jewelry Shop) ದರೋಡೆ ಪ್ರಕರಣದಲ್ಲಿ ಅಂತರರಾಜ್ಯ ದರೋಡೆಕೋರರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ದರೋಡೆಕೋರರ ಚಲನವಲನಗಳ ಹಲವು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶನಿವಾರ ಹಾಡಹಗಲೇ ದರೋಡೆಕೋರರು ಅಂಗಡಿ ಮಾಲೀಕನಿಗೆ ಗನ್ ಪಾಯಿಂಟ್‌ನಲ್ಲಿ ಇಟ್ಟು ಬಂಗಾರ ದೋಚಿದ್ದರು. ಆದರೆ, ಈ ಖತರ್ನಾಕ್ ಗ್ಯಾಂಗ್ ಯಾವುದೇ ರೀತಿಯ ಮೊಬೈಲ್, ಕಾರು ಹಾಗೂ ಬೈಕ್ ಸಹ ಬಳಸದೇ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹಾಡಹಗಲೇ ಜ್ಯುವೆಲರಿ ಶಾಪ್‌ಗೆ ನುಗ್ಗಿ ದರೋಡೆ – ಗನ್ ತೋರಿಸಿ 3 ಕೆಜಿ ಚಿನ್ನಾಭರಣ ದೋಚಿದ ಗ್ಯಾಂಗ್
ದರೋಡೆಗೂ ಮೊದಲು ನಾಲ್ಕು ಜನರ ಗ್ಯಾಂಗ್ ಆಟೋ ಮೂಲಕ ಸರಾಫ್ ಬಜಾರ್ ತನಕ ಬಂದಿದೆ. ದರೋಡೆ ಬಳಿಕ ಬ್ರಹ್ಮಪೂರ್ ಪೊಲೀಸ್ ಠಾಣೆವರೆಗೂ ಬಿಂದಾಸಾಗಿ ನಡೆದುಕೊಂಡೆ ಹೋಗಿದ್ದಾರೆ. ಬಳಿಕ ಅಲ್ಲಿಂದ ಆಟೋದಲ್ಲಿ ಕುಳಿತು ಕೇಂದ್ರೀಯ ಬಸ್ ನಿಲ್ದಾಣದ ಹಿಂಬದಿ ಗೇಟ್ ಬಳಿ ಇಳಿದುಕೊಂಡಿದ್ದಾರೆ. ಅಂಗಡಿ ಮಾಲೀಕನ ಮೊಬೈಲನ್ನು ಅಲ್ಲೇ ಬಿಸಾಡಿ ಕೇಂದ್ರ ಬಸ್ ನಿಲ್ದಾಣದ ಒಳಗೆ ನಾಲ್ಕು ಜನ ದರೋಡೆಕೊರರು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಅಂತರರಾಜ್ಯ ದರೋಡೆಕೋರರು ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳ ಪೊಲೀಸರಿಗೆ ದರೋಡೆಕೊರರ ಭಾವಚಿತ್ರಗಳನ್ನು ರವಾನಿಸಲಾಗಿದೆ.
ಪೊಲೀಸರ ದಾರಿ ತಪ್ಪಿಸಲು ಮೊಬೈಲ್ ಬಳಕೆ
ದರೋಡೆ ಸಮಯದಲ್ಲಿ ನಾಲ್ಕು ಜನ ದರೋಡೆಕೊರರು ಮೊಬೈಲ್ ಬಳಕೆ ಮಾಡದೆ ಕೈಯಲ್ಲಿ ಸುಮ್ಮನೆ ಮೊಬೈಲ್ ಹಿಡಿದು ಪೊಲೀಸರ ತನಿಖಾ ದಾರಿ ತಪ್ಪಿಸಲು ಪ್ಲ್ಯಾನ್ ಸಹ ಮಾಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ, ದರೊಡೆಕೋರರ ಪತ್ತೆಗೆ ಅಷ್ಟ ದಿಕ್ಕುಗಳಲ್ಲಿ ಪೊಲೀಸರು ಐದು ತಂಡಗಳಿಂದ ದರೋಡೆಕೊರರ ಚಲನವಲನಗಳ ಇಂಚಿಂಚು ಹೆಜ್ಜೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಒಬ್ಬೊಬ್ಬರಿಗೆ ಒಂದು ಜವಾಬ್ದಾರಿ
ಗ್ರಾಮೀಣ ಎಸಿಪಿ ನೈತೃತ್ವದ ತಂಡದಿಂದ ಟವರ್ ಲೋಕೆಷನ್, ಸಿಡಿಆರ್ ಸಂಗ್ರಹ, ಉತ್ತರ ವಿಭಾಗದ ಎಸಿಪಿಯಿಂದ ನಗರದ ಸಿಸಿಟಿವಿ ಪರೀಶಿಲನೆ, ದಕ್ಷಿಣ ಎಸಿಪಿ ನೈತೃತ್ವದ ತಂಡದಿಂದ ಅಂಗಡಿ ಮಾಲೀಕ ಹಾಗೂ ಗ್ರಾಹಕರ ಬಗ್ಗೆ ಮಾಹಿತಿ ಸಂಗ್ರಹ, ಅಶೋಕ ನಗರ ಠಾಣೆ ಇನ್ಸಪೆಕ್ಟರ್‌ಗೆ ಬಸ್‌ಗಳ ಬಗ್ಗೆ ಮಾಹಿತಿ ಹಾಗೂ ಸ್ಟೇಷನ್ ಬಜಾರ್ ಇನ್ಸಪೆಕ್ಟರ್ ರೈಲು ಪ್ರಯಾಣದ ಬಗ್ಗೆ ಪರೀಶಿಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಿಯತಮೆ ಕುಟುಂಬಸ್ಥರಿಂದ ಕೊಲೆ ಬೆದರಿಕೆ ಆರೋಪ – ಹೆದರಿ ಯುವಕ ಆತ್ಮಹತ್ಯೆ