ರಾಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ ಸೇರಿದಂತೆ ವಿಭಿನ್ನವಾದ ತಿಂಡಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ವಿಭಿನ್ನವಾಗಿ ರಾಗಿ ಒತ್ತು ಶ್ಯಾವಿಗೆ ಮಾಡಿ ಸವಿಯಿರಿ.
ಸಾಮಾನ್ಯವಾಗಿ ಇದನ್ನು ರಾಗಿ ಮುದ್ದೆ ಮಾಡಿದ ಹಾಗೆಯೇ ಮಾಡಲಾಗುತ್ತದೆ. ಮೊದಲಿಗೆ ರಾಗಿಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಅದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಗಂಟು ಆಗದಂತೆ ಕಲಸಿಕೊಳ್ಳಬೇಕು. ಬಳಿಕ ಇಡ್ಲಿ ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಬೇಕು. ಶ್ಯಾವಿಗೆ ಮಣೆಗೆ ಕಲಸಿದ ರಾಗಿ ಹಾಕಿ ಒತ್ತಬೇಕು. ಶ್ಯಾವಿಗೆಯನ್ನು ನೇರವಾಗಿ ಕಾದ ಇಡ್ಲಿ ಹಂಚಿಗೆ ಹಾಕಬೇಕು. ಮುಚ್ಚಳ ಮುಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ಆಗ ರಾಗಿ ಒತ್ತು ಶ್ಯಾವಿಗೆ ತಯಾರಾಗುತ್ತದೆ.
ಅದನ್ನು ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸವಿಯಬೇಕು.
ರಾಗಿ ಒಂದು ಪೌಷ್ಟಿಕಾಂಶಭರಿತ ಆಹಾರವಾಗಿದ್ದು, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಾಂಶ ಹೇರಳವಾಗಿದ್ದು, ಮೂಳೆಗಳನ್ನು ಬಲಪಡಿಸಲು, ಮಧುಮೇಹವನ್ನು ನಿಯಂತ್ರಿಸಲು ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.