ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ

Public TV
2 Min Read

ಬೆಂಗಳೂರು: ಬೆಸ್ಕಾಂನ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವಲಯದಲ್ಲಿನ (ಬಿಎಂಎಝಡ್) ಗ್ರಾಹಕರಿಗೆ ತಾವು ಬಳಸುವ ವಿದ್ಯುತ್ ಪ್ರಮಾಣದ ನಿಖರ ಮಾಹಿತಿ ತಿಳಿದುಕೊಳ್ಳಲು ಅನುಕುಲವಾಗುವ ಡಿಎಲ್‌ಎಂಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮಾಪನಗಳನ್ನು ನೀಡಲಾಗುತ್ತಿದೆ.

ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶ ವ್ಯಾಪ್ತಿಯಲ್ಲಿರುವ 17,68,000 ಎಲೆಕ್ಟ್ರೊ ಮೆಕಾನಿಕಲ್ ಮೀಟರ್‌ಗಳನ್ನು ಡಿಎಲ್‌ಎಂಎಸ್ ಸ್ಟ್ಯಾಟಿಕ್ ಡಿಜಿಟಲ್ ಮೀಟರ್‌ಗೆ ಬದಲಾವಣೆ ಮಾಡುವ ಕಾರ್ಯ ಜುಲೈ ತಿಂಗಳಲ್ಲಿ ಆರಂಭಗೊಂಡಿದೆ. ರಾಜಾಜಿನಗರ, ರಾಜರಾಜೇಶ್ವರಿನಗರ, ಇಂದಿರಾನಗರ ಮತ್ತು ವೈಟ್ ಫೀಲ್ಡ್ ವಿಭಾಗಗಳಲ್ಲಿ ಈಗಾಗಲೇ 16,000 ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮಾಪನಗಳನ್ನು ಅಳವಡಿಸಲಾಗಿದೆ. ಡಿಜಿಟಲ್ ಮೀಟರ್ ಬದಲಾವಣೆ ಕಾರ್ಯ ಭರದಿಂದ ಸಾಗಿದ್ದು ಪ್ರತಿನಿತ್ಯ 700 ರಿಂದ 900 ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ.

ಬೆಸ್ಕಾಂ ಒಂದು ವಿಭಾಗದಲ್ಲಿ ಮೀಟರ್ ಅಳವಡಿಕೆ ಕಾರ್ಯ ಪೂರ್ಣಗೊಂಡ ನಂತರವೇ ಇನ್ನೊಂದು ವಿಭಾಗದಲ್ಲಿ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. 2024ರ ವೇಳೆಗೆ 17,68,000 ಎಲೆಕ್ಟ್ರೋ ಮೆಕಾನಿಕಲ್ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗೆ ಬದಲಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ (ಮಾಪಕ ಮತ್ತು ವಾಣಿಜ್ಯ) ಪಿ.ರಂಗಸ್ವಾಮಿ ತಿಳಿಸಿದ್ದಾರೆ.

ಡಿಎಲ್‌ಎಂಎಸ್ ಸ್ಟ್ಯಾಟಿಕ್ ಮೀಟರ್ ಗ್ರಾಹಕ ಸ್ನೇಯಾಗಿದ್ದು ಸಿಂಗಲ್ ಫೇಸ್ ಅಥವಾ 3 ಫೇಸ್ ಮೀಟರ್ ಅಳವಡಿಸಿಕೊಂಡಿರುವ ಗ್ರಾಹಕರಿಗೆ ವಿದ್ಯುತ್ ವೊಲ್ಟೇಜ್ ಮತ್ತು ಬಳಕೆ ಕುರಿತು ಮಾಹಿತಿ ಪಡೆಯಬಹುದಾಗಿದೆ. ಈ ಡಿಜಿಟಲ್ ಮೀಟರ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದ್ದು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲವೆಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

10 ವರ್ಷಗಳ ಹಿಂದೆ ಅಳವಡಿಸಿರುವ ಎಲೆಕ್ಟ್ರೋ ಮೆಕಾನಿಕಲ್ ಮೀಟರ್‌ಗಳನ್ನು ಡಿಜಿಟಲ್ ಮೀಟರ್‌ಗೆ ಬದಲಿಸಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಡಿಜಿಟಲ್ ಮೀಟರ್‌ನ ಇನ್ನೊಂದು ಉಪಯೋಗವೇನೆಂದೆರೆ ಗ್ರಾಹಕರು ತಾವು 2 ವರ್ಷಗಳ ಹಿಂದಿನ ಅವಧಿಯವರೆಗೂ ಬಳಸಿದ ವಿದ್ಯುತ್ ಪ್ರಮಾಣದ ವಿವರಗಳನ್ನು ಬೆಸ್ಕಾಂ ಕಛೇರಿಯಿಂದ ಪಡೆದು ಅದನ್ನು ವಿದ್ಯುತ್ ಬಿಲ್ ಜೊತೆ ತುಲನೆ ಮಾಡಿ ತಾವು ಬಳಸಿರುವ ವಿದ್ಯುತ್ ಪ್ರಮಾಣ ಸರಿಯಾಗಿದೆಯೇ ಎಂದು ತಿಳಿಯಬಹುದಾಗಿದೆ.

ಬೆಂಗಳೂರು ನಗರದಲ್ಲಿ ಡಿಜಿಟಲ್ ಮೀಟರ್‌ನ ಅಳವಡಿಕೆ ಪೂರ್ಣಗೊಂಡ ನಂತರ ಬೆಂಗಳೂರು ಗ್ರಾಮಾಂತರ ಪ್ರದೇಶ ಮತ್ತು ಚಿತ್ರದುರ್ಗ-ದಾವಣಗೆರೆ ಪ್ರದೇಶ ವಲಯದಲ್ಲಿ ಡಿಜಿಟಲ್ ಮೀಟರ್‌ಗಳ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಡಿಜಿಟಲ್ ಮೀಟರ್ ಅಳವಡಿಕೆ ಕಾರ್ಯವನ್ನು 2 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದ್ದು ಎಲ್ಲಾ ವಿಭಾಗಳಲ್ಲಿ ಹಂತ ಹಂತವಾಗಿ ಅಳವಡಿಸಲಾಗುವುದು. ಈ ಯೋಜನೆಯ ಒಟ್ಟು ಮೊತ್ತ 139 ಕೋಟಿ ರೂ.ಗಳಾಗಿದ್ದು, ಸಿಂಗಲ್ ಫೇಸ್ ಡಿಜಿಟಲ್ ಮೀಟರ್‌ಗೆ 934 ರೂ. ಮತ್ತು 3 ಫೇಸ್ ಮೀಟರ್‌ಗೆ 2,312 ರೂ.ಯಾಗಿದೆ. ಈ ವೆಚ್ಚವನ್ನು ಬೆಸ್ಕಾಂ ಭರಿಸಲಿದೆ. ಇದನ್ನೂ ಓದಿ: ಮತ್ತೆ 19 ರಾಜ್ಯಸಭಾ ಸಂಸದರು ಅಮಾನತು

ಡಿಜಿಟಲ್ ಮೀಟರ್ ಮಾರಾಟ ಮಳಿಗೆ:
ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಅನುಕುಲವಾಗಲು ಬೆಸ್ಕಾಂನ ಎಲ್ಲಾ ವಿಭಾಗಗಳಲ್ಲಿ ಸಿಂಗಲ್ ಫೇಸ್ ಮತ್ತು 3 ಫೇಸ್ ಡಿಜಿಟಲ್ ಮೀಟರ್‌ಗಳ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಬೆಸ್ಕಾಂ ನಿಗದಿ ಪಡಿಸಿರುವ ದರದಲ್ಲಿ ವೆಂಡರ್‌ಗಳು ಗ್ರಾಹಕರಿಗೆ ಈ ಡಿಜಿಟಲ್ ಮೀಟರ್‌ಗಳನ್ನು ಮಾರಾಟ ಮಾಡಲಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರಾಟ ಮಳಿಗೆಗಳ ಸ್ಥಾಪನೆಯಿಂದ ಗ್ರಾಹಕರು ಮೀಟರ್ ಖರೀದಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *