ಕೈ ಸಚಿವರಿಗೆ ಡಿಕೆಶಿ ನಿವಾಸದಲ್ಲಿ ಉಪಹಾರ ಕೂಟ- ಸಭೆಯ ಇನ್ ಸೈಡ್ ಸ್ಟೋರಿ ಇಲ್ಲಿದೆ

Public TV
2 Min Read

ಬೆಂಗಳೂರು: ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಚಿವ ಡಿಕೆ ಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಸಚಿವರಿಗೆ ಭರ್ಜರಿ ಉಪಹಾರ ಕೂಟವನ್ನು ಆಯೋಜಿಸಿದ್ದು, ಈ ವೇಳೆ ಕಾಂಗ್ರೆಸ್ ಸಚಿವರು ಪಕ್ಷದ ಮುಖಂಡರಿಗೆ ಸರ್ಕಾರ ವಿರುದ್ಧ ದೂರಿನ ಸರಮಾಲೆಯನ್ನೇ ನೀಡಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಪ್ರಮುಖವಾಗಿ ಸರ್ಕಾರದ ವರ್ಗಾವಣೆಯದ್ದೇ ಹೈಲೈಟ್ ಆಗಿದ್ದು, ಎಲ್ಲಾ ಸಚಿವರು ತಮ್ಮ ಇಲಾಖೆಗಳಲ್ಲಿ ಉಂಟಾಗುತ್ತಿದ್ದ ಅಧಿಕಾರಿಗಳ ವರ್ಗಾವಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಡಿಸಿಎಂ ಪರಮೇಶ್ವರ್ ಅವರೇ ಅಸಹಾಯಕತೆ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆಯಲ್ಲೂ ವರ್ಗಾವಣೆ ನನಗೆ ಗೊತ್ತಾಗದೇ ನಡೆಯುತ್ತವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ವೇಳೆ ಡಿಸಿಎಂ ಪರಮೇಶ್ವರ್ ಮಾತಿಗೆ ಹಲವು ಸಚಿವರು ಸಾಥ್ ಕೊಟ್ಟಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣ ಕೆಲಸ ಮಾಡಬೇಕಾದರೂ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಅದು ಆಗುತ್ತಿಲ್ಲ. ಇಲಾಖೆಗಳಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂದು ಹೇಳಿದ್ದಾರೆ. ಈ ವೇಳೆ ಡಿಸಿಎಂ ಎಲ್ಲವನ್ನು ಸರಿಪಡಿಸೋಣ ಎಂದು ಹೇಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಸಿಎಂ ಪರ ಡಿಕೆಶಿ ಬ್ಯಾಟ್: ರಾಮನಗರ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ ಬೆಂಬಲ ನೀಡಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾಗಿದ್ದು. ಇದರ ಪ್ರತಿಫಲವಾಗಿ ಜಮಖಂಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಬೆಂಬಲ ಪಡೆಯುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಎರಡು ಕಡೆ ಮೈತ್ರಿ ಪಕ್ಷಗಳು ಗೆಲುವು ಸಾಧಿಸುವುದು ಸಾಧ್ಯ ಎಂದು ಡಿಕೆಶಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಕೆಲ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಚುನಾವಣೆ ಮೈತ್ರಿ ಮುಂದುವರಿಸುವ ಕುರಿತು ಕೆಪಿಸಿಸಿ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ಅವರು ಸಭೆ ನಡೆಸಿ ಫೈನಲ್ ಮಾಡುವ ಕುರಿತು ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ವೆಂಕಟರಮಣಪ್ಪ, ಕೃಷ್ಣ ಭೈರೇಗೌಡ, ಶಿವಶಂಕರ್ ರೆಡ್ಡಿ, ಆರ್.ಶಂಕರ್, ಶಿವಾನಂದ ಪಾಟೀಲ್, ಪುಟ್ಟರಂಗಶೆಟ್ಟಿ, ಡಿ.ಕೆ ಶಿವಕುಮಾರ್, ಕೆ.ಜೆ ಜಾರ್ಜ್, ಆರ್.ವಿ ದೇಶಪಾಂಡೆ, ಜಯಮಾಲಾ, ಪರಮೇಶ್ವರ್, ಯು.ಟಿ ಖಾದರ್, ರಾಜಶೇಖರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗವಹಿಸಿದ್ದರು. ಉಳಿದಂತೆ ರಮೇಶ್ ಜಾರಕಿಹೊಳಿ ಅವರು ಮಾತ್ರ ಸಭೆಗೆ ಗೈರು ಹಾಜರಿ ಆಗಿದ್ದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಸರ್ಕಾರದ ಸಚಿವರ ಯಾವುದೇ ಖಾತೆಯಲ್ಲಿ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಸಲಹೆಯಂತೆ ಈ ಉಪಾಹಾರ ಕೂಟ ಏರ್ಪಡಿಸಲಾಗಿದೆ. ಮುಂದಿನ ಬಾರಿ ಆರ್ ವಿ ದೇಶಪಾಂಡೆ ಮನೆಯಲ್ಲಿ ಉಪಾಹಾರ ಕೂಟ ಏರ್ಪಡಿಸಲಾಗುತ್ತದೆ. ಬಳಿಕ ಒಬ್ಬೊಬ್ಬರೇ ಸಚಿವರ ಮನೆಯಲ್ಲಿ ಏರ್ಪಡಿಸುತ್ತೇವೆ. ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಸಭೆಗೆ ಸಿದ್ದರಾಮಯ್ಯ ಆಗಮಿಸದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ಮನೆಯಲ್ಲಿ ಮಾಡಿದ ಸಭೆಯಲ್ಲಿ ಸಲಹೆ ಸೂಚನೆಯಂತೆ ಇಂದು ಸಭೆ ಮಾಡಿದ್ದೇವೆ. ಅವರು ತೀರ್ಮಾನದ ಮೇಲೆಯೇ ಸಭೆ ನಡೆದಿದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *