ಗೆಲುವಿನ ಸಂಭ್ರಮದಲ್ಲಿದ್ದ ಟೀಂ ಇಂಡಿಯಾಗೆ ಅಘಾತ – ಗಾಯದ ಸಮಸ್ಯೆಯಿಂದ ಧವನ್ ಔಟ್

Public TV
1 Min Read

ಲಂಡನ್: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ 3 ವಾರಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಧವನ್, ಪಂದ್ಯದ ವೇಳೆ ನಾಥನ್ ಕೌಲ್ಟರ್ ಲೈನ್ ಬೌಲಿಂಗ್ ನಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ನೋವಿನ ನಡುವೆಯೂ ಬ್ಯಾಟಿಂಗ್ ಮುಂದುವರಿಸಿದ್ದ ಧವನ್ ಅವರಿಗೆ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲು ವಿಶ್ರಾಂತಿ ನೀಡಲಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ವೇಳೆ ಟೀಂ ಇಂಡಿಯಾ ಫಿಲ್ಡೀಂಗ್ ನಲ್ಲಿ ಧವನ್ ಬದಲಿಗೆ ರವೀಂದ್ರ ಜಡೇಜಾ ಮೈದಾನಕ್ಕಿಳಿದಿದ್ದರು. ಆ ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಟ್ಟ ಧವನ್ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಪಂದ್ಯದಲ್ಲಿ ಧವನ್ 117 ರನ್ ಸಿಡಿಸಿ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

ಧವನ್ ಹೊರಗುಳಿದಿರುವ ಪರಿಣಾಮ ಅನಿರ್ವಾಯವಾಗಿ ಟೀಂ ಇಂಡಿಯಾ ಆರಂಭಿಕ ಜೋಡಿ ಬದಲಾಗಲಿದ್ದು, ರೋಹಿತ್ ಶರ್ಮಾರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಯಾರು ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ತೀರ್ಮಾನ ಕೈಗೊಳ್ಳಬೇಕಿದೆ.

ಸದ್ಯ ಆರಂಭಿಕ ಆಟಗಾರನಾಗಿ ಆಯ್ಕೆ ಆಗಿದ್ದ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುತ್ತಿದ್ದು, ರಿಷಬ್ ಪಂತ್ ಹಾಗೂ ರಾಯುಡು ಅವರು ರಿಸರ್ವ್ ಆಟಗಾರರಾಗಿರುವುದರಿಂದ ಆಯ್ಕೆ ಸಮಿತಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲವಿದೆ. ಇತ್ತ ಶ್ರೇಯಾಸ್ ಅಯ್ಯರ್ ಕೂಡ ಸ್ಥಾನ ಪಡೆಯುವ ರೇಸ್‍ನಲ್ಲಿದೆ.

ವಿಶ್ವಕಪ್ ಟೂರ್ನಿಯ ಭಾಗವಾಗಿ ಟೀಂ ಇಂಡಿಯಾ ಮುಂದಿನ ಹಂತದಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *